ಕೇಂದ್ರ ಗೃಹ ಸಚಿವರ ವಜಾಗೊಳಿಸಲು ಯುವ ಕಾಂಗ್ರೆಸ್ ಆಗ್ರಹ

| Published : Nov 14 2025, 02:00 AM IST

ಸಾರಾಂಶ

ನರಸಿಂಹರಾಜಪುರಪದೇ , ಪದೇ ದೇಶದಲ್ಲಿ ಉಗ್ರರ ದಾಳಿಯಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲವಾದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ನಿಂದ ತಹಸೀಲ್ದಾರ್ ಡಾ.ನೂರುಲ್‌ ಹುದಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

- ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪದೇ , ಪದೇ ದೇಶದಲ್ಲಿ ಉಗ್ರರ ದಾಳಿಯಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲವಾದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ನಿಂದ ತಹಸೀಲ್ದಾರ್ ಡಾ.ನೂರುಲ್‌ ಹುದಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಮನವಿಯಲ್ಲಿ, ಇತ್ತೀಚಿನ ದಿನಗಳಲ್ಲಿ ಹಿಂದಿಗಿಂತಲೂ ಹೆಚ್ಚಾಗಿ ಉಗ್ರರ ದಾಳಿಯಾಗುತ್ತಿದೆ. ಕಾಶ್ಮೀರದ ಕಹಿ ಘಟನೆ ಮರೆಯುವ ಮುನ್ನವೇ ದೇಶದ ರಾಜಧಾನಿ ಶಕ್ತಿಕೇಂದ್ರ ನವದೆಹಲಿ ಕೆಂಪು ಕೋಟೆಯ ಕೂಗಳತೆ ದೂರದಲ್ಲಿ ಉಗ್ರರು ಬಾಂಬ್ ಸ್ಫೋಟಿಸಿ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಪದೇ, ಪದೇ ದೇಶದ ಮೇಲೆ ಉಗ್ರರ ದಾಳಿಯಾಗುತ್ತಿದೆ. 2019 ರ ಫೆ. 14 ರಂದು ಅತ್ಯಂತ ಬಿಗಿಭದ್ರತೆ ಇರುವ ಪ್ರದೇಶಕ್ಕೆ 800 ಕೆಜಿಗೂ ಅಧಿಕ ತೂಕದ ಗ್ರೇನೈಡ್‌ಗಳನ್ನು ತಂದು ಸೈನಿಕರ ವಾಹನ ಗುರಿಯಾಗಿಸಿ ದಾಳಿ ಮಾಡಲಾಗಿತ್ತು. ಏ. 22 2025ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉದ್ಯಾನವನದಲ್ಲಿದ್ದ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಗುಂಡಿನ ಸುರಿಮಳೆ ಗೈದು 26 ಅಮಾಯಕರನ್ನು ಹತ್ಯೆಗೈದಿದ್ದರು. ಇದೀಗ ದೇಶದ ರಾಜಧಾನಿಯಲ್ಲೇ ಉಗ್ರರ ದಾಳಿಯಾಗಿದ್ದು ಈ ಘಟನೆ ಯಿಂದ ಕೇಂದ್ರ ಸರ್ಕಾರ ನಾಗರಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಚಿವರಾಗಿ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದರೆ ಎನ್ನುವುದನ್ನು ಸಾಬೀತು ಪಡಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ದಾಳಿಗಳು ಚುನಾವಣಾ ಸಂದರ್ಭ ದಲ್ಲೇ ನಡೆಯುತ್ತಿವೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪುಲ್ವಾಮಾ ದಾಳಿ ನಡೆದಿತ್ತು. ನಂತರ ಮಣಿಪುರ ದಲ್ಲಿ, ಇದೀಗ ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಬಿಹಾರ ಚುನಾವಣೆಯಲ್ಲಿ ಎನ್.ಡಿಎಗೆ ಮುಖಭಂಗವಾಗುವುದು ಖಚಿತ ಎಂದು ಸಮೀಕ್ಷೆಗಳು ಹೇಳಿದ ಬೆನ್ನಲ್ಲೇ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಕೂಡಲೇ ಗೌರವಾನ್ವಿತ ರಾಷ್ಟ್ರಪತಿಗಳು ಅಸಮರ್ಥ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ದಾಳಿ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು. ದೇಶದ ಮತ್ತು ನಾಗರೀಕರ ಸುರಕ್ಷತೆಗೆ ಉಗ್ರರು ದೇಶದೊಳಗೆ ಪ್ರವೇಶಿಸದಂತೆ ರಕ್ಷಣಾ ವ್ಯವಸ್ಥೆ ಬಲ ಗೊಳಿಸಲು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್‌ಗೌಡ ಅರಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಂಜೇಶ್‌ಬೀಳುವ, ಅಕ್ಸಿರ, ಯುವ ಕಾಂಗ್ರೆಸ್ ಮುಖಂಡರಾದ ವಿಜಯ್ , ವಿವೇಕ್ ಹಾಗೂ ಕಾಂಗ್ರೆಸ್ ಮುಖಂಡ ಮಹೇಶ್‌ಕಟ್ಟಿನ ಮನೆ ಉಪಸ್ಥಿತರಿದ್ದರು.