ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಮಿಥ್ಯಾರೋಪ ಮಾಡಿದ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಇನ್ನೊಂದು ವಾರದಲ್ಲಿ ಬಹಿರಂಗ ಕ್ಷಮೆ ಕೇಳದಿದ್ದರೆ ಶಾಸಕರ ದಾವಣಗೆರೆ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಯುವ ಕಾಂಗ್ರೆಸ್ ಜಿಲ್ಲಾ ಘಟಕ ಎಚ್ಚರಿಸಿದೆ.ನಗರದಲ್ಲಿ ಗುರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುಜಾಹಿದ್ ಪಾಷಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ವಿರುದ್ಧ ಹರಿಹರ ಶಾಸಕ ಬಿ.ಪಿ.ಹರೀಶ್ ಮಾಡಿದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇವೆಲ್ಲಾ ಸುಳ್ಳು ಆರೋಪಗಳಾಗಿವೆ ಎಂದರು.
ಇನ್ನು 7 ದಿನಗಳ ಒಳಗಾಗಿ ಶಾಸಕ ಬಿ.ಪಿ.ಹರೀಶ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ದಾವಣಗೆರೆಯಲ್ಲಿರುವ ಶಾಸಕರ ನಿವಾಸಕ್ಕೆ ಯುವ ಕಾಂಗ್ರೆಸ್‌ನಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಮರಳಿನ ಮಾಮೂಲು ಗಿರಾಕಿ, ಅತೀ ದೊಡ್ಡ ಭ್ರಷ್ಟ ಶಾಸಕರೆಂದರೆ ಅದು ಬಿ.ಪಿ.ಹರೀಶ ಎಂದು ಆರೋಪಿಸಿದರು.ಬಿಜೆಪಿ ನಾಯಕರು ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ತೇಜೋವಧೆಗೆ ಎಷ್ಟೇ ಪ್ರಯತ್ನಿಸಿದರೂ ವಿಫಲವಾಗುತ್ತಾರೆಯೇ ಹೊರತು ಎಂದಿಗೂ ಯಶಸ್ವಿಯಾಗುವುದಿಲ್ಲ. ಇದೇ ಬಿ.ಪಿ.ಹರೀಶ ಮೊದಲು ರೈತರ ಭೂಮಿಯನ್ನು ಕಬಳಿಸಿ, ಜಿಎಂಐಟಿ ಕಾಲೇಜು ನಿರ್ಮಾಣ ಮಾಡಿರುವುದರ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತಲಿ. ಅಂತಹ ಸಂತ್ರಸ್ಥರ ರೈತರ ಪರ ಹೋರಾಟ ಮಾಡಿ, ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಿಸಲಿ ಎಂದು ತಿಳಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದರೆ, ಆ ಎಲ್ಲರಲ್ಲೂ ಅಧಿಕಾರ ವಂಚಿತರಾಗಿ ಹುಚ್ಚರಂತೆ ವರ್ತಿಸುತ್ತಿರುವುದು, ಹೇಳಿಕೆಗಳನ್ನು ನೀಡುತ್ತಿರುವುದನ್ನು ಕಾಣಬಹುದು. ಆದಷ್ಟು ಬೇಗನೆ ಒಂದು ಒಳ್ಳೆಯ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾಗಲಿ. ಇನ್ನಾದರೂ ಹೇಳಿಕೆ ನೀಡುವಾಗ ಮೈಮೇಲೆ ಪ್ರಜ್ಞೆ ಇರಲಿ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಮಹಿಳಾ ಐಪಿಎಸ್ ಅಧಿಕಾರಿಗೆ ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ. ಮಹಿಳೆಯರ ಬಗ್ಗೆ ಶಾಸಕ ಬಿ.ಪಿ.ಹರೀಶ ಹೊಂದಿರುವ ಗೌರವ ಹಾಗೂ ಬಿಜೆಪಿ ಪಕ್ಷದ ಸಂಸ್ಕೃತಿ ಎಂತಹದ್ದು ಎಂಬುದನ್ನು ಈ ಮಾತುಗಳೇ ತೋರಿಸುತ್ತದೆ ಎಂದು ಟೀಕಿಸಿದರು.
ಹರಿಹರ ಬಿಜೆಪಿ ಶಾಸಕ ಹರೀಶ್ ವಿರುದ್ಧ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. 2006ರಲ್ಲಿ ಅಂದಿನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಸೋನಿಯಾ ನಾರಂಗ್ ಹೊನ್ನಾಳಿಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಂಡಂತೆ ಈಗಿನ ಎಸ್ಪಿ ಉಮಾ ಪ್ರಶಾಂತ್ ಸಹ ಕ್ರಮ ಜರುಗಿಸಬೇಕು ಎಂದು ಹೇಳಿದರು.ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಕೆ.ಪ್ರವೀಣಕುಮಾರ, ದಾದಾಪೀರ್, ಸಾದಿಕ್, ಶರತ್, ಹರೀಶ, ಜಿಲಾನಿ, ಇಮ್ರಾನ್, ಸಂದೇಶ, ಶಾಂತಕುಮಾರ ಇತರರು ಇದ್ದರು.