ಕೇಂದ್ರದ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್‌ ಪ್ರತಿಭಟನಾ ರ‍್ಯಾಲಿ

| Published : Apr 14 2025, 01:22 AM IST

ಕೇಂದ್ರದ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್‌ ಪ್ರತಿಭಟನಾ ರ‍್ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದ ಬಿಜೆಪಿ ಸರ್ಕಾರದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಡಾ. ಪುನೀತ್ ರಾಜಕುಮಾರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕೇಂದ್ರದ ಬಿಜೆಪಿ ಸರ್ಕಾರದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಡಾ. ಪುನೀತ್ ರಾಜಕುಮಾರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ ಭೀಮಾನಾಯ್ಕ ಮಾತನಾಡಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ಮಧ್ಯೆ ರಾಜ್ಯದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪಾದ. ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಆರ್ಥಿಕ ನೀತಿಯಿಂದ ಆರ್ಥಿಕ ವ್ಯವಸ್ಥೆ ನಿಯಂತ್ರಣ ತಪ್ಪಿದೆ. ಇದರಿಂದ ಜನಸಾಮಾನ್ಯರ ಬದುಕು ತತ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಜನರ ಹಣವನ್ನು ಬೇರೆ ಬೇರೆ ರೂಪದಲ್ಲಿ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ದೇಶದ ಜನರ ಹಿತ ಕಾಪಾಡಬೇಕಾದ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರದ ಗೃಹಮಂತ್ರಿ ಅಮಿತ್‌ ಶಾ ಅವರು ಅಂಬಾನಿ, ಅದಾನಿ ಅವರ ಹಿತ ಕಾಪಾಡುತ್ತಿದ್ದಾರೆ. ಕಾರ್ಪೋರೇಟ್‌ ಕಂಪನಿಗಳನ್ನು ಉದ್ಧಾರ ಮಾಡುತ್ತಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು, ಈಗ ರೈತರ ಬದುಕು ಮೂರಾಬಟ್ಟೆ ಮಾಡಿದ್ದಾರೆ. ಕಪ್ಪು ಹಣ ತರುತ್ತೇವೆ ಎಂದು ಹೇಳಿದವರು ತರಲೇ ಇಲ್ಲ. ಚುನಾವಣಾ ಬಾಂಡ್‌ ಮೂಲಕ ದೇಶದ ಜನರನ್ನು ಮೋಸ ಮಾಡಿದ್ದಾರೆ. ಸಂಸತ್‌ನಲ್ಲಿ ವಿರೋಧಪಕ್ಷದ ನಾಯಕರನ್ನು ಮಾತನಾಡಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಸಣ್ಣ ಸಣ್ಣ ಕೈಗಾರಿಕೆಗಳು ನಾಶವಾಗಿ ಸುಮಾರು 11 ಕೋಟಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಮೂಲಕ ಜನರ ಆದಾಯವನ್ನು ಕಸಿದುಕೊಂಡಿದೆ ಎಂದು ದೂರಿದರು.

ಇದೀಗ ಕೇಂದ್ರ ಸರ್ಕಾರ ಮತ್ತೆ ಡಿಸೇಲ್ ಮೇಲೆ ಲೀಟರ್‌ಗೆ ₹2 ಅಬಕಾರಿ ಶುಲ್ಕ ಹೆಚ್ಚಿಸಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹50 ಹೆಚ್ಚಿಸಿದೆ. ಸಿ ಎನ್‌ಜಿ ದರವನ್ನೂ ಪ್ರತಿ ಕೆಜಿಗೆ ₹ಒಂದು ಹೆಚ್ಚಿಸಿದೆ. ಡೀಸೆಲ್, ಅಡುಗೆ ಅನಿಲ, ಸಿ.ಎನ್.ಜಿ. ದರ ಹೆಚ್ಚಳ ಮಾಡಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಬಡ, ಮಧ್ಯಮವರ್ಗದವರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯುವಂತೆ ನಿರ್ದೇಶನ ನೀಡಬೇಕು. ಇಲ್ಲವೇ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಪ್ರತಿಭಟನಾನಿರತರು ತಳ್ಳು ಗಾಡಿಯ ಮೇಲೆ ಗ್ಯಾಸ್ ಸಿಲಿಂಡರ್‌ ಅನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಶಕುಂತಲಾ, ಮುಖಂಡರಾದ ಭರತ್ ಕುಮಾರ, ಷಣ್ಮುಖ ನಾಯಕ, ಜಿಶಾನ್ ಹ್ಯಾರಿಸ್, ಹಾರೂನ್ ಶೇಕ್, ಪ್ರದೀಪ್ ನಾಯ್ಕ, ಬಿ.ಗಣೇಶ್‌ ಮತ್ತಿತರರಿದ್ದರು.