ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

| Published : Apr 10 2025, 01:01 AM IST

ಸಾರಾಂಶ

ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್, ಅಡುಗ ಅನಿಲ ಬೆಲೆ ಏರಿಕೆ ಮಾಡಿದೆ. ಆದರೆ, ಬಿಜೆಪಿಯವರು ಜನಾಕ್ರೋಶ ಯಾತ್ರೆ ಮೂಲಕ ಬೀದಿಗಿಳಿದಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಹಳೆ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಗ್ಯಾಸ್ ಸಿಲಿಂಡರ್ ಬಳಸದೆ ಸೌದೆ ಒಲೆಯಲ್ಲಿಯೇ ಅಡುಗೆ ಮಾಡುವ ಸ್ಥಿತಿಗೆ ಕೇಂದ್ರ ಸರ್ಕಾರ ಜನರನ್ನು ತಂದಿದೆ ಎಂದು ಅಣಕು ಪ್ರದರ್ಶನ ಮಾಡಿದರು.

ದೇಶ ಮತ್ತು ರಾಜ್ಯ ವಿರೋಧಿ:

ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್, ಅಡುಗ ಅನಿಲ ಬೆಲೆ ಏರಿಕೆ ಮಾಡಿದೆ. ಆದರೆ, ಬಿಜೆಪಿಯವರು ಜನಾಕ್ರೋಶ ಯಾತ್ರೆ ಮೂಲಕ ಬೀದಿಗಿಳಿದಿದ್ದಾರೆ. ಮೊಸರು, ಹಾಲಿನ ಮೇಲೆ ಜಿಎಸ್‍ಟಿ ಹಾಕಲಾಗಿದೆ. ಹಾಗಾದರೆ ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕು. ಬಿಜೆಪಿಯವರು ಮಾಡುವ ಕೆಲಸ ಎಲ್ಲವೂ ದೇಶ ಮತ್ತು ರಾಜ್ಯ ವಿರೋಧಿ ಕೆಲಸಗಳೇ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಏನೇ ಮಾಡಿದರೂ ಜನರ ಒಳಿತಿಗಾಗಿ:

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ವಿ. ಚಂದ್ರಸಾಗರ್ ಮಾತನಾಡಿ, ಬಿಜೆಪಿಗರು ಬೇರೆಯವರನ್ನು ದೂಷಿಸುತ್ತಾರೆ. ಅವರು ಸರಿಯಾದ ಕೆಲಸ ಮಾಡುವುದಿಲ್ಲ. ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಮಾಡುತ್ತಿದೆ. ಗ್ಯಾಸ್ ಬೆಲೆಯನ್ನು ಒಂದೇ ಸಲ 50 ರು. ಹೆಚ್ಚಳ ಮಾಡಿದರ ಪರಿಣಾಮ ಬಡವರು, ರೈತರು, ಕೂಲಿ ಕಾರ್ಮಿಕರಿಗೆ ಆಗುತ್ತದೆ. ರಾಜ್ಯ ಸರ್ಕಾರ ಏನೇ ಮಾಡಿದರೂ ಜನರ ಒಳಿತಿಗಾಗಿ ಮಾಡುತ್ತದೆ ಎಂದರು.ಕಚ್ಚಾತೈಲದ ಬೆಲೆ ಕುಸಿತದ ಕಾರಣದಿಂದ ದೇಶದಲ್ಲೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 2ರಷ್ಟು ಇಳಿಕೆಯಾಗಿದೆ. ಈ ಬೆಲೆ ಕುಸಿತದ ಲಾಭವನ್ನು ಜನ ಸಾಮಾನ್ಯರಿಗೆ ವರ್ಗಾಯಿಸಲು ಮೋದಿ ಅವರಿಗೆ ಇಷ್ಟವಿಲ್ಲ. ಹೀಗಾಗಿ ಎರಡೂ ಇಂಧನಗಳ ಮೇಲೆ 2ರಷ್ಟು ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ ಎಂದರು.

ಗಾಯದ ಮೇಲೆ ಬರೆ:

ಹವಾಮಾನ ವೈಪರೀತ್ಯ, ಅತಿವೃಷ್ಠಿ, ಅನಾವೃಷ್ಟಿಗಳಿಂದ ರೈತರು ಬದುಕು ದುಸ್ತರವಾಗುತ್ತಿದೆ. ಸರಿಯಾದ ಬೆಳೆ ಮತ್ತು ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಚಂದ್ರಸಾಗರ್ ಆರೋಪಿಸಿದರು.

ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ವೆಂಕಟೇಶ್ ಮಾತನಾಡಿ, ಮೋದಿ ಅವರು ತಮ್ಮ ಸರ್ಕಾರದ ಆದಾಯ ಸಂಗ್ರಹಕ್ಕಷ್ಟೇ ಆದ್ಯತೆ ನೀಡುತ್ತಾರೆ. ಹಲವು ವರ್ಷಗಳಿಂದ ಹೀಗೇ ಮಾಡುತ್ತಿದ್ದು, ಕಚ್ಚಾತೈಲ ಬೆಲೆ ಇಳಿಕೆಯ ಲಾಭವು ಜನ ಸಾಮಾನ್ಯರಿಗೆ ಸಿಗದಂತೆ ಮಾಡಿದ್ದಾರೆ. ಅವರ ವಿಫಲ ಆರ್ಥಿಕ ನೀತಿಗಳ ಕಾರಣದಿಂದ ದೇಶದ ಹಣಕಾಸು ಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ಹೆಚ್ಚಾಗಿದೆ. ಎಲ್ಲ ಬೆಲೆಏರಿಕೆಗಳ ನಡುವೆ ಈಗ ಎಲ್‌ಪಿಜಿ ಸಿಲಿಂಡರ್‌ ಬೆಲೆ ಸಹ ಹೆಚ್ಚಳ ಮಾಡಿ, ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ದೂರಿದರು.

ಜಿಲ್ಲಾ ಉಪಾದ್ಯಕ್ಷ ಜನಾರ್ಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ವೆಂಕಟೇಶ್, ಪದಾಧಿಕಾರಿಗಳಾದ ಚೇತನ್ ಎಂ.ಎಸ್., ಸುಜಯ್ ಕುಮಾರ್, ಭೂಷಣ್, ವಿನಯ್ ಕುಮಾರ್, ದೀಪುಗೌಡ, ಮುಶೀರ್ ಎಂ, ಶಿವಕುಮಾರ್ ಇತರರು ಇದ್ದರು.

ಕೋಟ್‌..........

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆಯ ಲಾಭವನ್ನು ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗೆ ವರ್ಗಾಯಿಸಬೇಕಿತ್ತು. ಆದರೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ಮಾಡಿ, ಜನರನ್ನು ವಂಚಿಸಿದೆ.

ಸಿ.ವಿ. ಚಂದ್ರಸಾಗರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ

-------

9ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.