ಸಾರಾಂಶ
ಹಾವೇರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಭಾನುವಾರ ಸಂಜೆ ಮಳೆಯಾಗಿದ್ದು, ರಾಣಿಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ರಾಣಿಬೆನ್ನೂರು ತಾಲೂಕು ಕುದರಿಹಾಳ ಗ್ರಾಮದ ವಿನಾಯಕ ಮಹೇಂದ್ರ ಕೋಣಿ (26) ಎಂಬ ಯುವಕ ಸಿಡಿಲು ಹೊಡೆದು ಮೃತಪಟ್ಟಿದ್ದಾರೆ. ಕಳೆದೊಂದು ತಿಂಗಳಿನಿಂದ ಕಣ್ಮರೆಯಾಗಿದ್ದ ಮಳೆರಾಯ ಭಾನುವಾರ ಸಂಜೆ ಏಕಾಏಕಿ ಕಾಣಿಸಿಕೊಂಡಿದ್ದಾನೆ. ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಹಗುರ ಮಳೆ ಸುರಿಯಿತು. ದಿನವಿಡೀ ಬಿಸಿಲಿನ ತಾಪ ಹೆಚ್ಚಾಗಿತ್ತು. ಸಂಜೆ ನಾಲ್ಕು ಗಂಟೆಯ ವೇಳೆಗೆ ಮೋಡ ಕವಿದು ಜಿಲ್ಲೆಯ ಹಲವೆಡೆ ಹಗುರವಾಗಿ ಮಳೆ ಸುರಿಯಿತು. ದೀಪಾವಳಿ ಹಬ್ಬದ ನಿಮಿತ್ತ ನಗರ ಪ್ರದೇಶಕ್ಕೆ ಹೊಸ ಬಟ್ಟೆ, ಅಲಂಕಾರಿಕ ಸಾಮಗ್ರಿ ಸೇರಿ ಇನ್ನಿತರ ವಸ್ತುಗಳ ಖರೀದಿಗೆ ಆಗಮಿಸಿದ್ದ ಜನರು ಮಳೆಯಿಂದ ಸಮಸ್ಯೆ ಎದುರಿಸುವಂತಾಯಿತು. ಇನ್ನೂ ಗ್ರಾಮೀಣ ಭಾಗದಲ್ಲಿ ಮೆಕ್ಕೆಜೋಳ ತೆನೆ ಕಟಾವು ಮಾಡುವುದು ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆ ಭರದಿಂದ ಸಾಗಿದ್ದು, ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ರೈತರು ಪರದಾಡುವಂತಾಯಿತು. ಕಟಾವು ಮಾಡಿ ಕಣದಲ್ಲಿ, ರಸ್ತೆಯಲ್ಲಿ ಹರಗಿದ್ದ ಮೆಕ್ಕೆಜೋಳ ತೆನೆ ರಾಶಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು, ತಾಡಪತ್ರಿಯಿಂದ ರಾಶಿ ಮುಚ್ಚಲು ಹರಸಾಹಸ ಪಡುತ್ತಿದ್ದ ದೃಶ್ಯಗಳು ಎಲ್ಲೆಡೆ ಸಾಮಾನ್ಯವಾಗಿ ಕಂಡುಬಂದವು.