ಬ್ಯಾಡಗಿ: ಕುರಿಗಳಿಗೆ ನೀರು ಕುಡಿಸಲು ಹಾಗೂ ಕುರಿಯ ಮೈ ತೊಳೆಯಲು ಕಾಗಿನೆಲೆ ಗ್ರಾಮದ ದೊಡ್ಡ ಕೆರೆಗೆ ತೆರಳಿದ್ದ ಯುವಕನೊಬ್ಬ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಮಂಗಳವಾರ ನಡೆದಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಸಂತೋಷ ಪರಸಪ್ಪ ಮತ್ತೂರ (24) ಮೃತಪಟ್ಟ ದುರ್ದೈವಿ ಯುವಕ, ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ಕುರಿಗಳಿಗೆ ನೀರು ಕುಡಿಸಲು ಹಾಗೂ ಮೈ ತೊಳೆಯಲು ಕಾಗಿನೆಲೆ ಗ್ರಾಮದ ದೊಡ್ಡ ಕೆರೆಗೆ ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ, ಆದರೆ ಯುವಕ ಕೆರೆಗೆ ಬಿದ್ದಿರುವುದನ್ನು ಯಾರೂ ಗಮನಿಸದ ಕಾರಣ ನೀರಿನಿಂದ ಮೇಲೆ ಬರಲಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಕೆರೆಯಲ್ಲಿ ಹುಡುಕಾಟ ನಡೆಸಿ, ಮೃತದೇಹವನ್ನು ಹೊರ ತೆಗೆದಿದ್ದಾರೆ. ಬಳಿಕ ಮೃತದೇಹ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್‌ ಕರೆ ಮಾಡಿದ್ದಾರೆ. ಆದರೆ ಹಲವು ಬಾರಿ ಕರೆ ಮಾಡಿದರೂ ಸುಮಾರು 3 ಗಂಟೆಗಳ ಕಾಲ ಆ್ಯಂಬುಲೆನ್ಸ್‌ ಸ್ಥಳಕ್ಕೆ ಬಾರದಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕೆರೆ ದಡದಲ್ಲೇ ಪ್ರತಿಭಟನೆ: ಯುವಕನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಅಗತ್ಯ ವಾಹನದ ವ್ಯವಸ್ಥೆಯಾಗದಿರುವುದು ಕುಟುಂಬಸ್ಥರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತು. ಆ್ಯಂಬುಲೆನ್ಸ್‌ ಬರುವ ನಿರೀಕ್ಷೆಯಲ್ಲಿ ಗಂಟೆಗಟ್ಟಲೆ ಕಾದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರೊಂದಿಗೆ ಕೆರೆ ದಡದಲ್ಲೇ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸೇವೆ ದೊರೆಯದಿದ್ದರೆ ಸಾಮಾನ್ಯ ಜನರ ಗತಿಯೇನು? ಎಂಬ ಅಸಮಾಧಾನ ಹೊರ ಹಾಕಿದರು.

ಟಾಟಾ ಏಸ್‌ನಲ್ಲಿ ಮೃತದೇಹ ಸಾಗಣೆ: ದೀರ್ಘಕಾಲ ವಿಳಂಬವಾದರೂ ಆ್ಯಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೃತದೇಹವನ್ನು ಟಾಟಾ ಏಸ್ ವಾಹನದಲ್ಲಿ ಸಾಗಿಸಿದರು. ಯುವಕನ ಸಾವಿನಿಂದ ದುಃಖದಲ್ಲಿದ್ದ ಕುಟುಂಬಕ್ಕೆ ಮೃತದೇಹ ಸಾಗಿಸಲು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಮತ್ತಷ್ಟು ನೋವಿಗೆ ಕಾರಣವಾಯಿತು. ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆ್ಯಂಬುಲೆನ್ಸ್ ಸೇವೆ ವಿಳಂಬವಾದ ಕಾರಣ ಪರಿಶೀಲಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.