ಯುವಕರು ದುಶ್ಚಟಗಳಿಗೆ ಬಲಿಯಾಗದಿರಿ: ಸಚಿವ ಈಶ್ವರ ಖಂಡ್ರೆ

| Published : Apr 03 2024, 01:32 AM IST / Updated: Apr 03 2024, 01:33 AM IST

ಸಾರಾಂಶ

ಮಠಾಧೀಶರು ಸಮಾಜದಲ್ಲಿನ ಕೆಟ್ಟ ಚಟ ತಡೆಯಲು ದುಡಿಯುತ್ತಿದ್ದಾರೆ. ದರಲ್ಲಿ ವಿಶೇಷವಾಗಿ ಹಾರಕೂಡ ಶ್ರೀಗಳು ಮಠಾಧೀಶರಷ್ಟೆ ಅಲ್ಲದೇ ವಿದ್ವಾಂಸರಾಗಿದ್ದಾರೆ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ನಮ್ಮ ದೇಶ ಪುರಾತನ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಒಳಗೊಂಡಿದೆ. ಇಲ್ಲಿ ಅನೇಕ ಮತ ಪಂಥಗಳು ಜನರನ್ನು ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ತಾಲೂಕಿನ ಆಲಗೂಡ್‌ ಗ್ರಾಮದ ಶ್ರೀನಾಥ ಮಂದಿರದಲ್ಲಿ ಸದ್ಗುರು ವೀರನಾಥ ಮಲ್ಲಿನಾಥ ಮಹಾರಾಜ ಸಂಸ್ಥಾನದಿಂದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಸುಕ್ಷೇತ್ರ ಕಾಶಿಯವರ ಸಾನ್ನಿಧ್ಯದಲ್ಲಿ ಆಯೋಜಿಸಲಾದ 227 ನಾಥಸೃಷ್ಟಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುವಕರು ದುಶ್ಚಟ, ದುರ್ಗುಣಗಳಿಗೆ ಬಲಿಯಾಗುತ್ತಿದ್ದಾರೆ. ತಂದೆ, ತಾಯಿ, ಹಿರಿಯರಿಗೆ, ಗುರುಗಳಿಗೆ ಗೌರವವಿಲ್ಲವಾಗಿದೆ. ಇದರಿಂದ ಸಮಾಜದಲ್ಲಿ ಅನೀತಿ, ಅನ್ಯಾಯ, ಅತ್ಯಾಚಾರ ಕೆಲಸಗಳು ನಡೆಯುತ್ತಿವೆ. ಇದನ್ನೆಲ್ಲ ತಡೆಗಟ್ಟಲು ಮಠಾಧೀಶರು ಹಗಲು, ರಾತ್ರಿ ದುಡಿಯುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಹಾರಕೂಡ ಶ್ರೀಗಳು ಮಠಾಧೀಶರಷ್ಟೆ ಅಲ್ಲದೇ ವಿದ್ವಾಂಸರಾಗಿದ್ದಾರೆ. ಕಾಶಿ ಜಗದ್ಗುರುಗಳು ರಾಷ್ಟ್ರದಲ್ಲಿ ಒಳ್ಳೆಯ ಸೇವೆ ಮಾಡಿ ಜನರಲ್ಲಿ ಧಾರ್ಮಿಕ ನಂಬಿಕೆಗಳನ್ನು ಭಕ್ತಿ, ಶ್ರದ್ಧೆಯನ್ನು ಬೆಳೆಸುತ್ತಿದ್ದಾರೆ ಎಂದರು.

ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಭಾಗದಲ್ಲಿ ನಾಥ ಸೃಷ್ಟಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ ಗುರು ಬಾಬಾ ಮಹಾರಾಜ, ಗಹನಿನಾಥ ಮಹಾರಾಜ ಅವರ ಸೇವೆ ಸ್ಮರಣೀಯವಾಗಿದೆ ಎಂದರು.

ಶಾಸಕ ಶರಣು ಸಲಗರ, ಮಾಜಿ ಎಂಎಲ್‌ಸಿ ವಿಜಯಸಿಂಗ್‌ ಮಾತನಾಡಿ, ಧಾರ್ಮಿಕ ಚಟುವಟಿಕೆಗಳು ನಡೆಯುವದರಿಂದ ಜನರಿಗೆ ಶಾಂತಿ ಸಮಧಾನ ನೆಮ್ಮದಿ ಸಿಗುತ್ತದೆ ಎಂದರು.

ನೀಲಕಂಠ ರಾಠೋಡ, ಶಿವರಾಜ ನರಶೆಟ್ಟಿ, ಮಲ್ಲಿನಾಥ ಹಿರೇಮಠ, ಶರಣು ಅಲಗೂಡ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.