ಸಾರಾಂಶ
ಇತ್ತೀಚಿನ ದಿನಗಳಲ್ಲಿ ಯುವ ಮತದಾರರು ಮತದಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಅಸಡ್ಡೆ ತೊಲಗಿಸಬೇಕಾದರೆ ಮತ ಚಲಾಯಿಸುವದು ನಮ್ಮ ಹಕ್ಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಇಒ ಬಸವರಾಜ ಶರಭೈ ಹೇಳಿದರು. ಸಿರವಾರದ ಅತ್ತನೂರು ಗ್ರಾಮದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು.
ಕನ್ನಡಪ್ರಭ ವಾರ್ತೆ ಸಿರವಾರ
ಯುವ ಮತದಾರರು ಮತದಾನದಿಂದ ವಂಚಿತರಾಗಬಾರದು. ಮೇ 7ರಂದು ನಡೆಯಲಿರುವ ಮತದಾನದಲ್ಲಿ ಎಲ್ಲಾ ಯುವಕ, ಯುವತಿಯರು ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಇಒ ಬಸವರಾಜ ಶರಭೈ ಹೇಳಿದರು.ತಾಲೂಕಿನ ಅತ್ತನೂರು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ‘ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನ’ ಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವ ಮತದಾರರು ಮತದಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಅಸಡ್ಡೆ ತೊಲಗಿಸಬೇಕಾದರೆ ಮತ ಚಲಾಯಿಸುವದು ನಮ್ಮ ಹಕ್ಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಶೇ.100ರಷ್ಟು ಮತ ಪ್ರಮಾಣ ಹೆಚ್ಚಳ ಮಾಡಲು ಯುವಕರು ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಮತದಾರರ ಮನೆ ಮುಂದೆ ರಂಗೋಲಿ ಬಿಡಿಸಿ ಮತ ಚಲಾಯಿಸುವಂತೆ ಅವರ ಮನವೊಲಿಸುವ ಪ್ರಯತ್ನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕಾದರೆ ಪ್ರತಿಯೊಬ್ಬರು ಮತ ಚಲಾಯಿಸುವ ವಾಗ್ದಾನ ಮಾಡಬೇಕು ಎಂದರು.ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾದ ಅಂಗವಾಗಿ ನಡೆದ ರಂಗೋಲಿ, ಲೆಮನ್ ಸ್ಪೂನ್ ಮ್ಯೂಜಿಕ್ ಚೇರ್ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಮತದಾನ ಕುರಿತು ಪ್ರತಿಜ್ಞೆ ವಿಧಿ ಬೋಧನೆ ಮಾಡಲಾಯಿತು.
ಪಿಡಿಒ ರಮೇಶ, ಮತಗಟ್ಟೆ ಅಧಿಕಾರಿಗಳಾದ ರಾಚಪ್ಪ, ಶಿವಬಸ್ಸಮ್ಮ, ರಾಬೀಯ ಬೇಗಂ, ಮಹಿಬೂಬ್ ಅಲಿ, ಐಇಸಿ ಸಂಯೋಜಕ ರಾಜೇಂದ್ರ, ಗ್ರಾಪಂ ಸಿಬ್ಬಂದಿ, ಮತದಾರರು, ಸಾರ್ವಜನಿಕರು ಭಾಗವಹಿಸಿದ್ದರು.