ಯುವಕರೇ, ಈ ಭ್ರಷ್ಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ: ಚಂದ್ರಶೇಖರಯ್ಯ ಕರೆ

| Published : Jan 15 2024, 01:46 AM IST

ಯುವಕರೇ, ಈ ಭ್ರಷ್ಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ: ಚಂದ್ರಶೇಖರಯ್ಯ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ತಮ್ಮ ಶೈಕ್ಷಣಿಕ ಜೀವನದಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಬೇಕು. ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯುವಶಕ್ತಿ ದೇಶದ ಉನ್ನತಿಗೆ ಶ್ರಮಿಸಿದರೆ ನಮ್ಮ ರಾಷ್ಟ್ರ ಮತ್ತಷ್ಟು ಉತ್ತುಂಗಕ್ಕೇರುತ್ತದೆ. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಕ್ಕರೆ ಇನ್ನೂ ಹೆಮ್ಮರವಾಗಿ ಬೆಳೆಯಲು ಅವಕಾಶವಿರುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಎಲ್ಲೆಡೆ ತಾಂಡವವಾಡುತ್ತಿರುವ ಲಂಚ ಸ್ವೀಕಾರದಂತ ಭ್ರಷ್ಟ ವ್ಯವಸ್ಥೆಯನ್ನು ಯುವ ಸಮುದಾಯ ನಿರ್ನಾಮ ಮಾಡಲು ಪಣತೊಡಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಯುವ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ದಿಸೆ ಮುಗಿದ ನಂತರ ಯುವ ಸಮುದಾಯ ಕೆಲಸಕ್ಕೆ ಸೇರಿದ ನಂತರ ಲಂಚವನ್ನು ಪೂರ್ಣ ಪ್ರಮಾಣದಲ್ಲಿ ನಿರ್ನಾಮ ಮಾಡಲು ಆಗದಿದ್ದರೂ ಸಹ ಅದನ್ನು ವಿರೋಧಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ತಮ್ಮ ಶೈಕ್ಷಣಿಕ ಜೀವನದಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಬೇಕು. ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯುವಶಕ್ತಿ ದೇಶದ ಉನ್ನತಿಗೆ ಶ್ರಮಿಸಿದರೆ ನಮ್ಮ ರಾಷ್ಟ್ರ ಮತ್ತಷ್ಟು ಉತ್ತುಂಗಕ್ಕೇರುತ್ತದೆ ಎಂದರು.

ವಿದ್ಯಾರ್ಥಿ ದಿಸೆ ಮುಗಿದ ನಂತರ ಯುವ ಸಮುದಾಯ ಪ್ರಾಮಾಣಿಕರಾಗಿರಬೇಕು. ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಲಂಚವನ್ನು ಪೂರ್ಣ ಪ್ರಮಾಣದಲ್ಲಿ ನಿರ್ನಾಮ ಮಾಡಲು ಆಗದಿದ್ದರೂ ಸಹ ಅದನ್ನು ವಿರೋಧಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಬರುವ ಕೆಲ ಸುದ್ದಿಗಳನ್ನು ಓದಿದರೆ ಅದು ಸತ್ಯವೋ ಸುಳ್ಳೋ ಎಂಬ ಅನುಮಾನ ಮೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪತ್ರಕರ್ತರಾದವರು ಸುದ್ದಿ ಮಾಡುವ ಮೊದಲು ಅದು ಸತ್ಯವೋ ಅಥವಾ ಸುಳ್ಳೋ ಎಂದು ಪರಾಮರ್ಶಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಸುದರ್ಶನ್ ಚನ್ನಂಗಿಹಳ್ಳಿ ಮಾತನಾಡಿ, ಯುವಶಕ್ತಿಗೆ ಅಣು ಬಾಂಬ್‌ಗಿಂತಲೂ ಹೆಚ್ಚು ಶಕ್ತಿಯಿದೆ. ಅಂತಹ ಯುವಶಕ್ತಿ ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಬಹುದು. ಆದರೆ, ಸಮಾಜದಲ್ಲಿ ಅಂತಹ ಯುವಶಕ್ತಿಯನ್ನು ದುರ್ಬಳಕೆ ಮಾಡುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಕ್ಕರೆ ಇನ್ನೂ ಹೆಮ್ಮರವಾಗಿ ಬೆಳೆಯಲು ಅವಕಾಶವಿರುತ್ತದೆ ಎಂದರು.

ಯುವ ಸಮುದಾಯ ತಮ್ಮ ಅಮೂಲ್ಯ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ್ಯ ಮಾಡುತ್ತಿದೆ. ಅದರಲ್ಲೂ ಕೋವಿಡ್ ವೇಳೆ ಆನ್‌ಲೈನ್ ತರಗತಿ ಸಲುವಾಗಿ ಎಲ್ಲ ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟರು. ನಂತರ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಸದುಪಯೋಗದ ಜೊತೆಗೆ ದುರ್ಬಳಕೆಗೂ ಬಳಸಿದರು ಎಂದು ಆತಂಕ ವ್ಯಕ್ತಪಡಿಸಿದರು.

ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳ ಪರಿಶ್ರಮದಿಂದ ಅನ್ನ, ಅಕ್ಷರ ಆರೋಗ್ಯ ದಾಸೋಹಕ್ಕೆ ಹೆಸರಾಗಿರುವ ಆದಿಚುಂಚನಗಿರಿ ಮಠ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದು ಬಹುದೊಡ್ಡ ಹೆಮ್ಮರವಾಗಿ ಬೆಳೆಯುತ್ತಿದೆ. ಒಂದು ಮಠ ಸಮಾಜ ಕಟ್ಟುವ ಕೆಲಸದಲ್ಲಿ ಹೇಗೆ ತೊಡಗಿಸಿಕೊಳ್ಳುತ್ತದೆ ಎಂಬುದಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳೇ ಸಾಕ್ಷಿ ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಕೃಷಿಯನ್ನೇ ನಂಬಿ ಬದುಕುತ್ತಿದ್ದರೂ ಸಹ ಸರ್ಕಾರಿ ಉದ್ಯೋಗ, ಶಿಕ್ಷಣ, ರಾಜಕಾರಣ ಅಥವಾ ಆರ್ಥಿಕವಾಗಿ ಸಾಧನೆ ಮಾಡಲಾರದಂತಹ ಸಮುದಾಯಕ್ಕೆ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ದೊಡ್ಡ ನಾಯಕತ್ವ ಕೊಟ್ಟಿದ್ದಾರೆ. 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ 1.5ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನವನ್ನು ಕೊಡುತ್ತಿರುವ ಶ್ರೀಮಠದ ಸಮಾಜ ಮುಖಿ ಕಾರ್ಯನಿಜಕ್ಕೂ ಶ್ಲಾಘನೀಯ ಎಂದರು.

ಪರಿಸರದ ಅಸಮತೋಲನದ ಕಾರಣದಿಂದಾಗಿ ಕೃಷಿಕರಿಗೆ ಮತ್ತು ದೇಶಕ್ಕೆ ಆಗಿರುವ ತೊಂದರೆಯನ್ನು ಮನಗಂಡು ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡುವಂತಹ ತೀರ್ಮಾನ ಮಾಡಿದ ಮೊದಲ ಧಾರ್ಮಿಕ ಗುರು ಯಾರಾದರೂ ಇದ್ದರೆ ಅದು ಬಾಲಗಂಗಾಧರನಾಥಶ್ರೀಗಳು ಮಾತ್ರ ಎಂದರು.

ಯಾವುದೇ ಒಂದು ಸರ್ಕಾರ ಮಾಡಲಾಗದ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಸರಿಯಾದ ನಾಯಕತ್ವ ಇದ್ದರೆ ಏನೆಲ್ಲಾ ಬದಲಾವಣೆ ತರಬಹುದು ಎಂಬುದಕ್ಕೆ ಆದಿಚುಂಚನಗಿರಿ ಮಠ ಬೆಳೆದು ನಿಂತಿರುವುದೇ ಸಾಕ್ಷಿಯಾಗಿದೆ ಎಂದರು.