ಪ್ರತಿಭೆ ಹೊರತರಲು ಯುವಜನೋತ್ಸವ ಸಹಕಾರಿ

| Published : Oct 17 2025, 01:00 AM IST

ಸಾರಾಂಶ

ಯುವಜನರು ಜಿಲ್ಲೆಯ ಜಾನಪದ ಕಲೆಗಳು ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಿ ಜಿಲ್ಲೆಗೆ ಕೀರ್ತಿ ತರುವಂತೆ ನಗರಸಭೆ ಅಧ್ಯಕ್ಷ ಎಸ್. ಸುರೇಶ್ ಸಲಹೆ ನೀಡಿದರು

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಯುವಜನರು ಜಿಲ್ಲೆಯ ಜಾನಪದ ಕಲೆಗಳು ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಿ ಜಿಲ್ಲೆಗೆ ಕೀರ್ತಿ ತರುವಂತೆ ನಗರಸಭೆ ಅಧ್ಯಕ್ಷ ಎಸ್. ಸುರೇಶ್ ಸಲಹೆ ನೀಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರು. ಜಿಲ್ಲೆಯ ಸಾಕಷ್ಟು ಕಲಾವಿದರು ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಜಿಲ್ಲೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಿದ್ದಾರೆ. ಕಲಾವಿದರು ತಮ್ಮಲ್ಲಿರುವ ಕಲಾಪ್ರತಿಭೆ ಹೊರತರಲು ಯುವಜನೋತ್ಸವ ಕಾರ್ಯಕ್ರಮವನ್ನು ವೇದಿಕೆಯಾಗಿ ಬಳಸಿಕೊಳ್ಳುವ ಮೂಲಕ ಜಿಲ್ಲೆಗೆ ಉತ್ತಮ ಹೆಸರು ತರಬೇಕು ಎಂದು ಸುರೇಶ್ ಅವರು ಆಶಿಸಿದರು.

ನಗರಸಭೆ ಸದಸ್ಯ ಮಹೇಶ್ ಮಾತನಾಡಿ, ಚಾಮರಾಜನಗರ ನಗರಸಭೆ ವತಿಯಿಂದ ಪಟ್ಟಣದ ಮೂರು ದಿಕ್ಕುಗಳಲ್ಲಿಯೂ ಜಾನಪದ ಕಲೆಗಳ ತವರೂರು ಎಂಬ ನಾಮಫಲಕ ಅಳವಡಿಸಲಾಗಿದ್ದು, ಇದು ಸರ್ಕಾರದಿಂದ ಅಧಿಕೃತವಾಗಿ ಘೋಷಣೆಯಾಗಬೇಕು. ಜಿಲ್ಲೆಯ ಜಾನಪದ ಕಲೆ, ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಿದೆ. ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ, ಕಲಾವಿದರು ಸಿಗುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕಠಿಣ ಪರಿಶ್ರಮ, ತ್ಯಾಗವನ್ನು ಮೈಗೂಡಿಸಿಕೊಳ್ಳಬೇಕು. ನಗರದಲ್ಲಿ ವಿದ್ಯಾರ್ಥಿಗಳಿಗೆ, ಯುವಜನರಿಗೆ ಅನುಕೂಲವಾಗುವಂತೆ ಯೂತ್ ಹಾಸ್ಟಲ್ ತೆರೆಯಬೇಕು. ಅಲ್ಲದೆ, ಯುವ ತರಬೇತಿಯ ವಿಶೇಷ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಬೇಕು. ಯುವಪ್ರತಿಭೆಗಳು ಹೆಚ್ಚಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ.ಸಿ. ಶೃತಿ ಮಾತನಾಡಿ, ಚೆಲುವ ಚಾಮರಾಜನಗರ ಜಾನಪದ ಕಲೆಗಳ ತವರೂರು. ಅನೇಕ ಜಾನಪದ ಕಲೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಿದ ಕೀರ್ತಿ ಜಿಲ್ಲೆಗೆ ಸಲ್ಲುತ್ತದೆ. ಯುವಜನೋತ್ಸವ ಕಾರ್ಯಕ್ರಮವು ಯುವ ಸಮೂಹಕ್ಕೆ ತಮ್ಮ ಕಲೆಗಳನ್ನು ಹೊರ ಹಾಕಲು ಒಂದು ವೇದಿಕೆಯಾಗಿದೆ. ಪ್ರತಿಯೊಂದು ಸ್ಪರ್ಧೆಯು ಸೋಲು ಗೆಲುವಿನಿಂದ ಕೂಡಿದ್ದು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸುರೇಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಕರನ್ನು ಗುರಿಯಾಗಿಸಿಕೊಂಡು ಯುವನೀತಿ ಜಾರಿಗೊಳಿಸಿವೆ. ಯುವಕರಲ್ಲಿ ಅಡಗಿರುವ ಕಲೆ, ಸಂಸ್ಕೃತಿ, ಕ್ರೀಡೆ ಇನ್ನಿತರೆ ಚಟುವಟಿಕೆಗಳನ್ನು ಹೊರತರುವುದೇ ಯುವನೀತಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಯುವಜನತೆಯನ್ನು ಪ್ರೊತ್ಸಾಹಿಸಲು ಯುವಜನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ದೇವಾನಂದ ವರಪ್ರಸಾದ್, ಚಾಮರಾಜನಗರ ವಿ.ವಿ. ಜಾನಪದ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್ ಜಗದೀಶ್, ಎನ್.ಎಸ್.ಎಸ್. ಸಂಯೋಜಕ ಡಾ. ಮಹೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಋಗ್ವೇದಿ, ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ದಸರಾ ಸ್ತಬ್ದಚಿತ್ರ ಚಿತ್ರ ಕಲಾವಿದ ಮಧುಸೂದನ್, ಸಾಹಿತಿ ಶೀಲಾ ಸತ್ಯೇಂದ್ರಸ್ವಾಮಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಜಿ. ಬಂಗಾರು, ಮುಖಂಡರಾದ ಪದ್ಮಾ ಪುರುಷೋತ್ತಮ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಜಾನಪದ ಗೀತೆ, ನೃತ್ಯ, ಚಿತ್ರಕಲೆ, ಕಥೆ ಹಾಗೂ ಕವಿತೆ ಬರೆಯುವ ಸ್ಪರ್ಧೆ ಸೇರಿದಂತೆ ಇತರೆ ಸ್ಪರ್ಧೆಗಳು ಯುವಜನರಿಗಾಗಿ ನಡೆದವು. ಸಭಾಂಗಣದ ಹೊರ ಆವರಣದಲ್ಲಿ ವಿಜ್ಞಾನ ಮೇಳ ಆಯೋಜಿಸಲಾಗಿತ್ತು.