ಕನ್ನಡಪ್ರಭ ವಾರ್ತೆ ಬೆಂಗಳೂರು
ಬಸವ ಜಯಂತಿ ಪ್ರಯುಕ್ತ ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಷನ್ ಸಹಯೋಗದಲ್ಲಿ ಏ.20ರಂದು ‘ಯುವೋತ್ಸವ- ಉದ್ಯೋಗ ಮೇಳ 2026’ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.30ರಿಂದ ಸಂಜೆ 4.30ರ ವರೆಗೆ ಮಲ್ಲೇಶ್ವರದ ಎಸ್‍ಎಚ್‍ವಿಎನ್‍ಎಂ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ಆವರಣದಲ್ಲಿ ಈ ಉದ್ಯೋಗ ಮೇಳ ಜರುಗಲಿದೆ. ಕಾಯಕವೇ ಕೈಲಾಸ ಎಂಬ ತತ್ವವನ್ನು ಜಗತ್ತಿಗೆ ನೀಡಿದ ಭಕ್ತಿ ಭಂಡಾರಿ ಬಸವಣ್ಣರನ್ನು ನಾವು ಪೂಜಿಸಿ, ಆರಾಧಿಸುತ್ತೇವೆ. ಹೀಗಾಗಿ ಅವರ ಜಯಂತಿ ಪ್ರಯುಕ್ತ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಉದ್ಯೋಗ ಮೇಳ ಆಯೋಜಿಸುತ್ತಾ ಬಂದಿದ್ದೇವೆ. ಇದರಿಂದ ಸಾಕಷ್ಟು ಉದ್ಯೋಗಾಕಾಂಕ್ಷಿಗಳಿಗೆ ಸಹಾಯವಾಗಿದೆ. ಈ ಬಾರಿ ‘ಸರ್ವರಿಗೂ ಉದ್ಯೋಗ’ ಎಂಬ ಧ್ಯೇಯವಾಕ್ಯದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ. ಈ ಮೇಳಕ್ಕೆ ಭಾರತ್ ಕರಿಯರ್ ಕನೆಕ್ಟ್ ಕೈ ಜೋಡಿಸಿದೆ ಎಂದರು.100ಕ್ಕೂ ಹೆಚ್ಚು ಕಂಪನಿ ಭಾಗಿ:ಯುವ ಸಬಲೀಕರಣಕ್ಕೆ ಸಹಾಯವಾಗಬಲ್ಲ ವೃತ್ತಿ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ತರಬೇತಿ, ಉದ್ಯೋಗ ಮೇಳ, ಉದ್ಯಮಶೀಲತಾ ಅಭಿವೃದ್ಧಿ ಮತ್ತು ಆರ್ಥಿಕ ಸೇರ್ಪಡೆ ಇವುಗಳ ಕುರಿತು ಮಾಹಿತಿ ನೀಡಲಾಗುವುದು. ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಾದ ನೇರ ಸಂವಾದ, ನೇಮಕಾತಿ, ವೃತ್ತಿ ಅನ್ವೇಷಣೆಗೆ ಸಾಮಾನ್ಯ ವೇದಿಕೆಯನ್ನು ಈ ಮೇಳ ಒದಗಿಸಲಿದೆ. ಐಟಿ, ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ, ಚಿಲ್ಲರೆ ವ್ಯಾಪಾರ, ಲಾಜಿಸ್ಟಿಕ್ ಮತ್ತು ಸೇವಾ ಕ್ಷೇತ್ರಗಳ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಈ ಮೇಳ ಸುಮಾರು 5 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳಿಗೆ ವೇದಿಕೆ ಒದಗಿಸಲಿದೆ ಎಂದು ಹೇಳಿದರು.
ಪಿಯುಸಿಯಿಂದ ಸ್ನಾತಕೋತ್ತರ ಪದವಿ:
ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿದವರು, ಸದ್ಯ ಈ ಕೋರ್ಸ್ ಮಾಡುತ್ತಿರುವವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಕನಿಷ್ಠ ಸಾವಿರ ಆಕಾಂಕ್ಷಿಗಳಿಗೆ ಕೌಶಲ್ಯ ಅಭಿವೃದ್ಧಿ, ಕೌಶಲ್ಯ ಉನ್ನತೀಕರಣ, ಪ್ರಶಿಕ್ಷಣ, ಸ್ವಯಂ ಉದ್ಯೋಗ, ಉದ್ಯಮಶೀಲತೆ, ಜೀವನೋಪಾಯ ಮತ್ತು ಇತರ ಕ್ಷೇತ್ರಗಳಲ್ಲಿ ಯುವಕರಿಗೆ ಅನುಕೂಲ ಒದಗಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಮೇಳದಲ್ಲಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದವರು ಮಾತ್ರವಲ್ಲದೇ ಎಲ್ಲಾ ಕಡೆಯವರು ಭಾಗವಹಿಸಬಹುದು. ಮೇಳದಲ್ಲಿ ಭಾಗಿಯಾಗುವ ಉದ್ಯೋಗಾಕಾಂಕ್ಷಿಗಳಿಗೆ ಉಟೋಪಚಾರ ಸೇರಿ ಎಲ್ಲಾ ಸೌಲಭ್ಯ ಕಲ್ಪಿಸುವುದಾಗಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.