ಕೊಪ್ಪಳ: ಗೆಳೆಯರೊಂದಿಗೆ ಈಜಲು ತೆರಳಿದ್ದ 17 ವರ್ಷದ ಯುವಕನೊಬ್ಬ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಾಪತ್ತೆಯಾಗಿರುವ ಘಟನೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಸಮೀಪ ನಡೆದಿದೆ.
ಬಸಾಪುರ ಗ್ರಾಮದ ಟಿ. ಕಿರಣಗೌಡ ನಾಪತ್ತೆಯಾದ ಯುವಕ. ಆತನ ಪತ್ತೆಗಾಗಿ ಕಳೆದ ಎರಡು ದಿನಗಳಿಂದ ಕಾಲುವೆ ಹಾಗೂ ಸಣಾಪುರ ಕೆರೆ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.ಮಂಗಳವಾರ ಮಧ್ಯಾಹ್ನ ಕಿರಣಗೌಡ ತನ್ನ ಇಬ್ಬರು ಗೆಳೆಯರೊಂದಿಗೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಈಜಲು ತೆರಳಿದ್ದ. ಆತನ ಜತೆ ಇದ್ದ ಇಬ್ಬರು ಗೆಳೆಯರು ದಡ ಸೇರಿದ್ದಾರೆ. ಆದರೆ, ಕಿರಣಗೌಡ ನೀರಿನಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಕೂಡಲೇ ಸ್ನೇಹಿತರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮುನಿರಾಬಾದ್ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಗಿದೆ. ಪಿಎಸ್ಐ ಅಮರೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ದಿನಗಳಿಂದ ಶೋಧ: ಯುವಕನ ಪತ್ತೆಗಾಗಿ ಸ್ಥಳೀಯ ಈಜುಗಾರರ ನೆರವಿನೊಂದಿಗೆ ಶೋಧ ಕಾರ್ಯ ಆರಂಭಿಸಲಾಯಿತು. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಸೇರಿದಂತೆ ಸಣಾಪುರ ಕೆರೆ ವ್ಯಾಪ್ತಿಯಲ್ಲಿ ಶೋಧ ನಡೆಸಿದರೂ ಕಿರಣಗೌಡ ಪತ್ತೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಯುವಕನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷ-ಆತಂಕ: ಯುವಕ ನಾಪತ್ತೆಯಾದ ಬೆನ್ನಲ್ಲೇ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ಸುತ್ತಮುತ್ತಲಿನ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಕಾಲುವೆ ಮತ್ತು ಜಲಮೂಲಗಳಲ್ಲಿ ಇಳಿಯುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂಬ ಕಳವಳವೂ ವ್ಯಕ್ತವಾಗಿದೆ.
ಈ ಘಟನೆ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.