ಯುವ ಸಮೂಹ ಭಾಷೆ, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು

| Published : Jan 09 2025, 12:48 AM IST

ಸಾರಾಂಶ

ಶಿವಮೊಗ್ಗ: ಯುವ ಸಮೂಹ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಅಗತ್ಯ ಹಿಂದಿಗಿಂತ ವರ್ತಮಾನಕ್ಕೆ ಬಹಳ ಅಗತ್ಯವಿದ್ದು, ನಮ್ಮೊಳಗಿನ ಅರಿವನ್ನು ವಿಸ್ತರಿಸಲು ಪರಿಣಾಮಕಾರಿಯಾಗಿ ನಿಲ್ಲಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಶಿವಮೊಗ್ಗ: ಯುವ ಸಮೂಹ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಅಗತ್ಯ ಹಿಂದಿಗಿಂತ ವರ್ತಮಾನಕ್ಕೆ ಬಹಳ ಅಗತ್ಯವಿದ್ದು, ನಮ್ಮೊಳಗಿನ ಅರಿವನ್ನು ವಿಸ್ತರಿಸಲು ಪರಿಣಾಮಕಾರಿಯಾಗಿ ನಿಲ್ಲಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಸಹ್ಯಾದ್ರಿ ಕಾಲೇಜುಗಳ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀಮತಿ ಗುಡ್ಡೇಕೇರಿ ಕಾಡಮ್ಮ ದುಗ್ಗಪ್ಪ ಹೆಗಡೆ ಸ್ಮಾರಕ ದತ್ತಿ ಮತ್ತು ಎಪಿಎಂಸಿ ನಿವೃತ್ತ ಕಾರ್ಯದರ್ಶಿ ಶರಶ್ಚಂದ್ರ ರಾನಡೆ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತರಗತಿಯ ಆಚೆಗಿನ ಕಲಿಕೆ ಅಪಾರ ಜ್ಞಾನ ಸಂಪತ್ತು ಒದಗಿಸಲಿದೆ. ಆದರೆ ನಮ್ಮ ಯುವ ಸಮೂಹ ಎಲ್ಲದರಿಂದ ದೂರವಿರಲು ಬಯಸಿ, ಆಧುನಿಕತೆಯ ವ್ಯಸನಿಗಳಂತೆ ರೂಪಗೊಳ್ಳುವುದು ಸರಿಯಲ್ಲ. ಅದಕ್ಕಾಗಿಯೆ ನೀವಿರುವಲ್ಲಿಯೆ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಕುವೆಂಪು ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ವಿಚಾರವಾಗಿ ಸಾಹಿತಿ ಡಾ.ಅಣ್ಣಪ್ಪ ಎನ್.ಮಳೀಮಠ ಮಾತನಾಡಿ, ಕುವೆಂಪು ಅವರು ಅಂಧ ಶ್ರದ್ಧೆಯನ್ನು ಕಟುವಾಗಿ ವಿರೋಧಿಸುತ್ತಾ, ಎಲ್ಲರೊಳಗೂ ಅಜ್ಞಾನ ದೂರ ಮಾಡುವ ಪ್ರಯತ್ನ ಮಾಡಿದರು. ಪರಿಸರ ಎಂದರೆ ಬೆಟ್ಟಗುಡ್ಡ, ಮನುಷ್ಯ, ಜೀವನ, ಮನಸ್ಸು ಎಲ್ಲವನ್ನೂ ಒಳಗೊಂಡಿದೆ. ಸಾಹಿತ್ಯದ ಗಂಧವನ್ನು ಯುವಜನತೆ ನೀವು ಅಂಟಿಸಿಕೊಳ್ಳದಿದ್ದರೆ ನಿಮ್ಮ ಪ್ರತಿಭೆ ಬೆಳಗಲು ಸಾಧ್ಯವಾಗುವುದಿಲ್ಲ. ಕುವೆಂಪು ಅವರ ಸಾಹಿತ್ಯ ಓದದೆಯಿದ್ದರೆ ನಾವು ಜೀವಂತವಿದ್ದು ಸತ್ತಂತೆ. ಜಗತ್ತಿನ ಆರೋಗ್ಯಕ್ಕೆ ನಾವು ಕಾರಣ ಆಗುವುದಾದರೆ ಕುವೆಂಪು ಸಾಹಿತ್ಯ ಓದಿ ಎಂದು ಕರೆ ನೀಡಿದರು.

ದ.ರಾ.ಬೇಂದ್ರೆ ಅವರ ಕವನಗಳ ಗಾಯನ, ವಿಶ್ಲೇಷಣೆ ಕುರಿತು ಮಾತನಾಡಿದ ಪತ್ರಕರ್ತ ದೀಪಕ್ ಸಾಗರ, ಬೇಂದ್ರೆ ಅವರು ಧಾರವಾಡ ಸೀಮೆಯ ಕನ್ನಡ ಪದಗಳನ್ನು ಬಳಸುತ್ತಲೆ ವರ್ತಮಾನದಲ್ಲಿ ಮಾತನಾಡುವ ಪ್ರಯತ್ನ ಮಾಡಿದವರು. ಕನ್ನಡಕ್ಕೆ ಹೊಸ ಪದಗಳನ್ನು ಒದಗಿಸಿದರು. ಕನ್ನಡ ಕಟ್ಟಲು, ಬೆಳೆಸಲು ನಾಡಿನ ಎಲ್ಲಾ ಊರುಗಳಿಗೂ ಸಂಚರಿಸಿದ್ದರು. ಬೇರೆಯವರು ಬರೆದ ಪುಸ್ತಕಗಳನ್ನು ತಲೆಯಮೇಲೆ ಹೊತ್ತು ಪುಸ್ತಕ ಓದುವ ಸಂಸ್ಕೃತಿಯನ್ನು ಪ್ರೋತ್ಸಾಹ ಮಾಡಿದರು ಎಂದು ತಿಳಿಸಿದರು.ಬೇಂದ್ರೆ ಅವರ ಕವನಗಳನ್ನು ಗಾಯಕರಾದ ಸಹನಾ ಜಿ.ಭಟ್ ಹಾಡಿದರು. ವಿದ್ಯಾರ್ಥಿ ನಿಲಯ ಪಾಲಕಿ ಡಾ.ಕೆ.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಡಿ.ಗಣೇಶ್ ಉಪಸ್ಥಿತರಿದ್ದರು.