ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಬಾಲ್ಯವಿವಾಹ, ಬಾಲಕಾರ್ಮಿಕತೆ ಸಮಾಜವನ್ನು ಕಾಡುತ್ತಿರುವ ಪಿಡುಗುಗಳಾಗಿದ್ದು, ಅದರ ತಡೆಗೆ ವಿದ್ಯಾರ್ಥಿ, ಯುವಜನತೆ ಮನಸ್ಸು ಮಾಡಬೇಕು, ಪೋಷಕರಿಗೆ ಅರಿವು ನೀಡುವುದರ ಜತೆಗೆ ಅಂತಹ ಪ್ರಕರಣಗಳು ಕಂಡು ಬಂದರೆ ಮಕ್ಕಳ ಸಹಾಯವಾಣಿಗೆ ದೂರು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಹೇಳಿದರು.
ತಾಲ್ಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಕ್ಕಳಿಗೆ ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯಿದೆಗಳ ಕುರಿತು ಅರಿವು ನೀಡುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಕ್ಕುಗಳಿಗೆ ಚ್ಯುತಿಯಾದರೆ ದೂರು
ಮಕ್ಕಳ ಹಕ್ಕುಗಳಿಗೆ ಚ್ಯುತಿಯಾದರೆ ೧೦೯೮ ಅಲ್ಲದೇ ೧೪೪೯೯ ಸಹಾಯವಾಣಿಗೂ ದೂರು ಸಲ್ಲಿಸಬಹುದಾಗಿದೆ ಎಂದ ಅವರು, ಕಾಯಿದೆಯಡಿ ಮದುವೆಯಾಗಲು ಹೆಣ್ಣಿಗೆ ೧೮ ಹಾಗೂ ಗಂಡಿಗೆ ೨೧ ವರ್ಷ ಕಡ್ಡಾಯವಾಗಿದೆ, ಅದಕ್ಕೂ ಮೊದಲು ಮದುವೆ ಮಾಡಿದರೆ ಬಾಲ್ಯವಿವಾಹ ಕಾಯಿದೆಯಡಿ ಅಪರಾಧವಾಗಿದ್ದ ಜೈಲು ಹಾಗೂ ೧ ಲಕ್ಷ ದಂಡವಿದೆ ಮತ್ತು ಹೆಣ್ಣು ಅಪ್ರಾಪ್ತೆಯಾಗಿದ್ದಾಗಲೇ ಗರ್ಭಿಣಿಯಾದರೆ ಪೋಕ್ಸೋ ಕಾಯಿದೆಯಡಿ ಶಿಕ್ಷೆ ಖಚಿತ ಎಂದರು.
ಮಕ್ಕಳಿಗೆ ಮದುವೆ ಮಾಡುವುದು, ಕೆಲಸಕ್ಕೆ ದೂಡುವುದು ಸರಿಯಲ್ಲ, ಅವರು ಆಟವಾಡುತ್ತಾ ಕಲಿಯುವ ಅವರ ಹಕ್ಕುಗಳನ್ನು ಕಿತ್ತುಕೊಳ್ಳಲು ಯಾರಿಗೂ ಅಧಿಕಾರಿವಿಲ್ಲ, ಶಿಕ್ಷಣವೂ ಕಡ್ಡಾಯ ಹಕ್ಕಾಗಿದೆ ಎಂದು ತಿಳಿಸಿ, ನಿಮ್ಮ ಸ್ನೇಹಿತರು ಇಂತಹ ಸಮಸ್ಯೆಗೆ ಸಿಲುಕಿದ್ದರೆ ಕೂಡಲೇ ತಿಳಿಸಿ ಎಂದು ಕಿವಿಮಾತು ಹೇಳಿದರು.
ಮಾದಕವಸ್ತುಗಳಿಂದ ದೂರವಿರಿ
ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ಯುವಕರು, ಮಕ್ಕಳು ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ, ಇದರಿಂದ ಅಪಾರಾಧಗಳಿಗೆ ಅವಕಾಶವೂ ನೀಡಿದಂತಾಗಿದೆ ಎಂದ ಅವರು, ಎಲ್ಲೇ ಆಗಲಿ ಮಾದಕ ವಸ್ತು ಮಾರಾಟ ನಡೆಯುತ್ತಿದ್ದರೆ ಕೂಡಲೇ ಪೊಲೀಸರಿಗೆ ದೂರು ನೀಡಿ ಮಾದಕ ವ್ಯಸನಕ್ಕೆ ದಾಸರಾಗುವುದನ್ನು ತಪ್ಪಿಸಿ ಎಂದರು.
ವಕೀಲ ಫಯಾಜ್ ಅಹಮದ್ ಮಾತನಾಡಿ, ಬಾಲ್ಯವಿವಾಹ ಕಾಯಿದೆ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರ ಅನೇಕ ಕಠಿಣ ಕಾನೂನು ತಂದಿದೆ, ಶಿಕ್ಷಣವೂ ಒಂದು ಹಕ್ಕಾಗಿದೆ, ಮಕ್ಕಳ ಭವಿಷ್ಯಕ್ಕೆ ಮಾರಕವಾಗಿ ಬಾಲ್ಯವಿವಾಹ ಮಾಡಿದರೆ ತಂದೆ,ತಾಯಿ, ಮದುವೆ ಮಾಡಿಸಿದ ಪುರೋಹಿತ, ಮದುವೆಗೆ ಸ್ಥಳ ನೀಡಿದ ಕಲ್ಯಾಣ ಮಂಟಪದ ಮಾಲೀಕನಿಗೂ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದರು.
ಬಾಲ್ಯವಿವಾಹಕ್ಕೆ ಯತ್ನಿಸಿದರೆ ತಿಳಿಸಿ
ಮಕ್ಕಳಲ್ಲಿ ದೈಹಿಕ, ಮಾನಸಿಕ ಪ್ರಬುದ್ದತೆ ಬರುವ ಮುನ್ನಾ ಮದುವೆ ಮಾಡಿ ಅವರ ಜೀವನಕ್ಕೆ ಕಂಟಕವುಂಟು ಮಾಡುವ ಪೋಷಕರಿಗೆ ಶಿಕ್ಷೆಯ ಕುರಿತು ತಿಳಿಸಿ ಮತ್ತು ನಿಮ್ಮ ಸ್ನೇಹಿತರ ಮದುವೆಗೆ ಪ್ರಯತ್ನ ನಡೆದಿದ್ದರೆ ಸಹಾಯವಾಣಿಗೆ ದೂರು ನೀಡಿ, ನಿಮ್ಮ ಹೆಸರು ರಹಸ್ಯವಾಗಿಡಲಾಗುವುದು ಎಂದರು.
ಉಪಪ್ರಾಂಶುಪಾಲ ಸಿ.ಎಂ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದು,ನಿಮಗೆ ಉದ್ಯೋಗ ನೀಡುವುದು ಸಹಾ ಬಾಲಕಾರ್ಮಿಕ ನಿಷೇಧ ಕಾಯಿದೆಯಡಿ ಅಪರಾಧವಾಗಿದ್ದು, ನಿಮ್ಮ ಶಿಕ್ಷಣದ ಹಕ್ಕನ್ನು ಕಸಿಯಲು ಯಾರಿಗೂ ಅವಕಾಶವಿಲ್ಲ, ಶ್ರದ್ಧೆಯಿಂದ ಓದಿ ಸಾಧಕರಾಗಿ ಹೊರಹೊಮ್ಮಿ ಎಂದರು.ಶಿಕ್ಷಕರಾದ ಆರ್.ಆನಂದಕುಮಾರ್, ಸುಮಾ, ಸುರೇಶ್ ಇದ್ದರು.