ಕ್ರೀಡೆಯಲ್ಲಿ ಸಾಧಿಸಲು ಯುವಜಜನಾಂಗಕ್ಕೆ ವೇದಿಕೆ ಅಗತ್ಯ

| Published : Mar 12 2025, 12:50 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾ ಪೊಲೀಸ್ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮಹಿಳಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಬಳಿಕ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ಬ್ಯಾಟಿಂಗ್‌ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈಯ್ಯಲು ಯುವಕ, ಯುವತಿಯರಿಗೆ ವೇದಿಕೆ ಒದಗಿಸುವ ಮೂಲಕ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.ನಗರದ ಜಿಲ್ಲಾ ಪೊಲೀಸ್ ಕ್ರೀಡಾ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮಹಿಳಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಷಯ ತಿಳಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ನಮ್ಮ ಜಿಲ್ಲೆಯಲ್ಲಿಯೂ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದಾರೆ. ಕ್ರೀಡೆಗಳು ಯುವಜನರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮುಂಚೂಣಿಗೆ ಬರಲು ನೆರವಾಗಲಿವೆ. ಮುಖ್ಯವಾಗಿ ಕ್ರೀಡಾಪಟುಗಳಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಅವಶ್ಯವಾಗಿದೆ. ಕ್ರೀಡೆಯಲ್ಲಿ ಹೆಣ್ಣುಮಕ್ಕಳಿಗೂ ಸಮಾನಾವಕಾಶ ಕಲ್ಪಿಸುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ ಎಂದರು. ಜಿಲ್ಲೆಯಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ನಗರದ ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ನುರಿತ ತರಬೇತುದಾರರ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಖೋ-ಖೋ ಕ್ರೀಡಾಪಟು ಚೈತ್ರ ಅವರ ಸಾಧನೆಯನ್ನು ಪ್ರಶಂಸಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಮನುಷ್ಯನಿಗೆ ಶಿಕ್ಷಣದಷ್ಟೇ ಕ್ರೀಡೆಯು ಮುಖ್ಯವಾಗಿದೆ. ಇಂದು ಮಹಿಳೆಯರು ಕ್ರೀಡೆಯೂ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯಾಗಿದೆ. ಹೆಣ್ಣುಮಕ್ಕಳ ಸಾಧನೆಗೆ ಚೈತ್ರ ಅವರು ಸ್ಪೂರ್ತಿಯಾಗಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಎಸ್. ಸುರೇಶ್ ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕು. ಉತ್ತಮ ಸಾಧನೆಗೈಯ್ಯಲು ಇದು ಇತರರಿಗೂ ಪ್ರೇರಣೆಯಾಗಲಿದೆ ಎಂದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಂತಾರಾಷ್ಟ್ರೀಯ ಖೋ-ಖೋ ಕ್ರೀಡಾಪಟು ಟಿ.ನರಸೀಪುರ ತಾಲೂಕಿನ ಕುರಬೂರಿನ ಚೈತ್ರ, ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ನೆರವಾದ ತರಬೇತುದಾರ ಮಂಜುನಾಥರನ್ನು ಸ್ಮರಿಸಿ, ಬಳಿಕ ಮಾತನಾಡಿ ಮಹಿಳೆಯರು ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಸೋಲು ಗೆಲುವು ಪ್ರಮುಖವಾಗಬಾರದು. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಮುನ್ನೆಡೆಯಬೇಕು. ಆಗಮಾತ್ರ ಸಾಧನೆ ನಮ್ಮನ್ನು ಹಿಂಬಾಲಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಕ್ರೀಡಾಜ್ಯೋತಿಯನ್ನು ಕ್ರೀಡಾಪಟುಗಳಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಉಪಾಧ್ಯಕ್ಷ ಮಮತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸುರೇಶ್, ಯುವ ಸ್ಪಂದನ ಅಧಿಕಾರಿ ಶಾಂತರಾಜು ಇದ್ದರು.