ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಇಂಟರ್‌ನೆಟ್ ಆಧಾರಿತ ಸೇವೆಗಳ ಬಳಕೆಯಲ್ಲಿ ಜನರು ಹಲವು ರೀತಿ ವಂಚನೆಗೊಳಗಾಗುತ್ತಿದ್ದಾರೆ. ಇಂತಹ ಸೇವೆ ವಂಚನೆ ಪ್ರಕರಣದಲ್ಲಿ ಯುವಕರೇ ಹೆಚ್ಚು ಅಪರಾಧಿಗಳಾಗುತ್ತಿದ್ದಾರೆ. ಈ ಹಿನ್ನೆಲೆ ಸೈಬರ್ ಅಪರಾಧ ಕಾಯ್ದೆ ಬಗ್ಗೆ ಯುವಕರು ಅಗತ್ಯ ಅರಿವು ಹೊಂದಿರಬೇಕು ಎಂದು ದಾವಣಗೆರೆಯ ಡಿವೈಎಸ್‌ಪಿ ರುದ್ರೇಶ ಉಜ್ಜಿನಕೊಪ್ಪ ಹೇಳಿದರು.ತಾಲೂಕಿನ ಸಲಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-1 ಮತ್ತು 2ರ ವತಿಯಿಂದ ನಡೆದ ವಾರ್ಷಿಕ ಶಿಬಿರ ಉದ್ಘಾಟಿಸಿ, ಕಾನೂನು ಅರಿವು ಮತ್ತು ಸಾಮಾಜಿಕ ಸುರಕ್ಷತೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಭಾರತದಂತಹ ದೇಶದಲ್ಲಿ ಆನ್‍ಲೈನ್ ಸೇವೆಗಳು ಮತ್ತು ಆ್ಯಪ್ ಆಧಾರಿತ ಸೇವೆ, ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್‍ನಂತಹ ಚಟುವಟಿಕೆಗಳಲ್ಲಿ ಜನಸಾಮಾನ್ಯರು ತೊಡಗುತ್ತಿರುವುದು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯು ಒಳಗೊಂಡಂತೆ ಗೆಮ್ಸ್-ಬೆಟ್ಟಿಂಗ್ ಆ್ಯಪ್, ಆನ್‍ಲೈನ್ ಬ್ಯಾಂಕಿಂಗ್, ಸರಕು ಖರೀದಿ, ಯುಪಿಐ ಪಾವತಿ ಹೀಗೆ ಹಲವು ಸ್ವರೂಪದ ಚಟುವಟಿಕೆಗಳಲ್ಲಿ ವಂಚನೆಗಳ ಪ್ರಕರಣಗಳು ಸಮಾಜದಲ್ಲಿ ಏರಿಕೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಸಲಗನಹಳ್ಳಿಯ ಗ್ರಾ.ಪಂ. ಸದಸ್ಯರಾದ ನಾಗೇನಹಳ್ಳಿ ಗಂಗಮ್ಮ ಲೋಕಪ್ಪ, ಮುಖಂಡರಾದ ಶ್ರೀನಿವಾಸ ನಂದಿಗಾವಿ ವೀರೇಶ್ ಬ. ಅಜ್ಜಣ್ಣನವರ್ ಮಾತನಾಡಿದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಂದ್ರಶೇಖರ್ ಆರ್., ವಾಣಿಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಲಕ್ಷ್ಮಣ ನಾಯ್ಕ ಆರ್., ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಯೋಗೇಶ್ ಕೆ.ಜೆ., ಉಪನ್ಯಾಸಕ ಡಾ.ಮಾಲತೇಶ ಎ.ಎನ್., ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಲಕ್ಷ್ಮೀ ಎನ್., ರವೀಂದ್ರನಾಥ್ ಬಿ.ಜೆ. ಹಾಗೂ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿ ಮಹೇಶ್ ಪಿ.ಎಂ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
- - -(ಬಾಕ್ಸ್) * ಗ್ರಾಹಕ ಹಕ್ಕುಗಳ ಅರಿವು ಮುಖ್ಯ: ವಕೀಲ ವೆಂಕಟೇಶ್‌ದಾವಣಗೆರೆಯ ವಕೀಲ ವೆಂಕಟೇಶ್ ಎಸ್. ಅವರು ಗ್ರಾಹಕರ ಹಿತರಕ್ಷಣಾ ಕಾನೂನು ಎಂಬ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಜನರು ಮಾರಾಟಗಾರರಿಂದ ಮೋಸಕ್ಕೆ ಒಳಗಾಗುತ್ತಿರುವ ಸಂದರ್ಭಗಳು ಹೆಚ್ಚುತ್ತಿವೆ. ಕಳಪೆ ಗುಣಮಟ್ಟದ ಉತ್ಪನ್ನಗಳು, ಸೇವೆಗಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳಿಂದ ಸಾರ್ವಜನಿಕರನ್ನು ಮರಳು ಮಾಡಿ ಹಣ ಲಪಟಾಯಿಸುವ ಸಾಧ್ಯತೆಗಳಿವೆ. ಗ್ರಾಹಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತರಾಗುವುದು ಬಹಳ ಮುಖ್ಯ. ಗ್ರಾಹಕ ಹಿತರಕ್ಷಣಾ ಕಾಯ್ದೆ ಅಂತಹ ನಂಬಿಕೆ ದ್ರೋಹ ಅಥವಾ ನಿರ್ಲಕ್ಷ್ಯಕ್ಕೆ ತ್ವರಿತ ಪರಿಹಾರ ನೀಡುವ ಗುರಿ ಹೊಂದಿದೆ ಎಂದರು.
- - --21ಎಚ್‍ಆರ್‍ಆರ್01.ಜೆಪಿಜಿ:
ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-1 ಮತ್ತು 2ರ ವತಿಯಿಂದ ಸಲಗನಹಳ್ಳಿ ಗ್ರಾಮದಲ್ಲಿ ವಾರ್ಷಿಕ ಶಿಬಿರ ಕಾನೂನು ಅರಿವು ಮತ್ತು ಸಾಮಾಜಿಕ ಸುರಕ್ಷತೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.