ಯುವ ಸಂಸತ್ ಒಂದು ಆಟವಾಗಿರದೆ ಪ್ರಜಾಪ್ರಭುತ್ವದ ಪಾಠಶಾಲೆಯಾಗಿದೆ ಎಂದು ವಿಧಾನಸಭೆ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ರಾಣಿಬೆನ್ನೂರು: ಯುವ ಸಂಸತ್ ಒಂದು ಆಟವಾಗಿರದೆ ಪ್ರಜಾಪ್ರಭುತ್ವದ ಪಾಠಶಾಲೆಯಾಗಿದೆ ಎಂದು ವಿಧಾನಸಭೆ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಸ್ಥಳೀಯ ನಗರಸಭೆ ಸರ್.ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಯುವ ಸಂಸತ್ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ನಮಗೆ ಹೊರಗಿನಿಂದ ಬಂದ ಕಲ್ಪನೆಯಲ್ಲ. ಹನ್ನೆರಡನೇ ಶತಮಾನದಲ್ಲೇ ಬಸವಣ್ಣನವರ ಅನುಭವ ಮಂಟಪದಲ್ಲಿ ರಾಜ-ರೈತ, ಮೇಲು-ಕೀಳು, ಗಂಡು-ಹೆಣ್ಣು ಎನ್ನದೇ ಎಲ್ಲರೂ ಸಮಾನವಾಗಿ ಕುಳಿತು ಚರ್ಚಿಸುತ್ತಿದ್ದರು. ಅದನ್ನೇ ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲಾಗುತ್ತದೆ. ಹಾವೇರಿ ಜಿಲ್ಲೆ ಅಂತಹ ಸಮಾನತೆಯ ಧ್ವನಿಗಳ ತವರು. ಜಾತಿಯ ಗೋಡೆಗಳನ್ನು ಪ್ರಶ್ನಿಸಿದ ಕನಕದಾಸರು ಮತ್ತು ಜನರ ನುಡಿಯಲ್ಲೇ ಜ್ಞಾನ ಹಂಚಿದ ಸರ್ವಜ್ಞ ಇಬ್ಬರೂ ಈ ನೆಲದವರು. ಪ್ರತಿಯೊಬ್ಬರ ಧ್ವನಿಗೂ ಬೆಲೆ ಇದೆ ಎಂಬುದೇ ಪ್ರಜಾಪ್ರಭುತ್ವದ ಸಾರ. ಅದನ್ನು ಅವರು ಅಂದೇ ಸಾಧಿಸಿ ತೋರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಪ್ರಕಾರ ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ, ಅದನ್ನು ನಡೆಸುವವರು ಒಳ್ಳೆಯವರಾಗಿರದಿದ್ದರೆ ಅದು ಫಲ ಕೊಡುವುದಿಲ್ಲ. ಸಂವಿಧಾನದ ಶಕ್ತಿ ಪುಸ್ತಕದಲ್ಲಿಲ್ಲ, ಅದನ್ನು ವಾಚಿಸುವವರ ನಡತೆಯಲ್ಲಿದೆ. ಆದ್ದರಿಂದ ನಾವೆಲ್ಲ ಈ ನೆಲದ ಕಾನೂನಿನ ಮೇಲೆ ನಡೆಯಬೇಕು ಎಂದರು.

ಸದನ ಮಾತನಾಡುವ ಜಾಗ ಮಾತ್ರವಲ್ಲ, ಅದು ಕೇಳುವ ಜಾಗವೂ ಆಗಿದೆ. ಎದುರಿನವರ ಮಾತು ಪೂರ್ತಿ ಕೇಳದೇ ಉತ್ತರ ಕೊಡುವುದು ಚರ್ಚೆಯಲ್ಲ. ಆಡಳಿತ ಪಕ್ಷ ಸರ್ಕಾರ ನಡೆಸಿದರೆ ವಿರೋಧ ಪಕ್ಷ ಸರ್ಕಾರವನ್ನು ಎಚ್ಚರದಲ್ಲಿಡುತ್ತದೆ. ಎರಡೂ ಸೇರಿದಾಗಲೇ ಪ್ರಜಾಪ್ರಭುತ್ವ ಪೂರ್ಣವಾಗುತ್ತದೆ. ಆದ್ದರಿಂದ ನಾವು ವಿರೋಧ ಪಕ್ಷದವರ ವಿಚಾರಗಳಿಗೂ ಗೌರವ ಕೊಡಬೇಕು. ಪ್ರಶ್ನೋತ್ತರ ಅವಧಿ ಜನರ ಧ್ವನಿಯಾಗಿದ್ದು ರಸ್ತೆ, ಶಾಲೆ, ಕುಡಿಯುವ ನೀರು ಮುಂತಾದ ಸಮಸ್ಯೆಗಳು ಹಾಗೂ ರೈತರ ಸಮಸ್ಯೆ ಬಂದಾಗ ಇಡೀ ಸರ್ಕಾರ ಅದಕ್ಕೆ ಉತ್ತರಿಸಬೇಕಾಗುತ್ತದೆ. ಅದೇ ಪ್ರಜಾಪ್ರಭುತ್ವದ ಸೌಂದರ್ಯ, ನಿಯಮವಿಲ್ಲದ ಸದನ ಸಂತೆಯಾಗುತ್ತದೆ. ಆದ್ದರಿಂದ ಸದಸ್ಯರು ಸದನದ ನಿಯಮಗಳಿಗೆ ತಲೆಬಾಗಬೇಕು ಎಂದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ. ಜಯಚಂದ್ರ ಮಾತನಾಡಿ, ಸಂಸತ್ ಹಾಗೂ ವಿಧಾನಸಭೆಗಳಿಗೆ ಪ್ರಗತಿಪರ ವ್ಯಕ್ತಿಗಳು ಸದಸ್ಯರಾಗಿ ಆಯ್ಕೆಯಾಗಿ ಬರಬೇಕು. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಸಮಾಜದಲ್ಲಿ ಏಕತೆ ತರಲು ಶ್ರಮಿಸಿದರು. ನಮ್ಮ ಸಂವಿಧಾನಕ್ಕೆ ಬಸವೇಶ್ವರ ಚಿಂತನೆಗಳು ಪ್ರೇರಣೆ ಆಗಿವೆ. ಸಂವಿಧಾನದ ಆಶಯಗಳ ಈಡೇರಿಕೆಗೆ ಜನರು ಕೈ ಜೋಡಿಸಬೇಕು. ಹಕ್ಕಿನ ಬಗ್ಗೆ ಮಾತನಾಡುವ ಮುನ್ನ ನಮ್ಮ ಕರ್ತವ್ಯ ಬಗ್ಗೆ ಯೋಚನೆ ಮಾಡಬೇಕು ಎಂದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮತದಾರರು ವ್ಯಕ್ತಿ ಪೂಜೆಗಿಂತ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಡಳಿತ ಪಕ್ಷದಲ್ಲಿದ್ದರೂ ತಮ್ಮ ಸರ್ಕಾರವನ್ನು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಂಡು ಹೋಗಬೇಕು. ಯುವಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದು ಮುಂದಿನ ಪೀಳಿಗೆಗೆ ರಾಜಕೀಯ ಸಂಸ್ಕೃತ ಕಲಿಸುವ ಕಾರ್ಯಕ್ರಮವಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಕಡೆಗೆ ಯುವಕರು, ವಿದ್ಯಾವಂತರ ಆಸಕ್ತಿ ಕಡಿಮೆಯಾಗಿದೆ. 2024ರಲ್ಲಿ ಸಂಸದರಾದ 225 ಜನರ ಮೇಲೆ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಿವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಯೋಗ್ಯರನ್ನು ಆರಿಸಿ ಕಳುಹಿಸಬೇಕು ಎಂದರು.

ಜಿಪಂ ಸಿಇಒ ದಲ್ಜಿತ್‌ಕುಮಾರ, ಯುವ ಸಂಸತ್ ಸ್ಪೀಕರ್ ಹರ್ಷ ಹನಗೋಡಿಮಠ ವೇದಿಕೆಯಲ್ಲಿದ್ದರು.

ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ರುಡಾ ಅಧ್ಯಕ್ಷ ಎಂ.ಕೆ. ಕಿಲ್ಲೆದಾರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹೇಶ ಕಂಬಳಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ವಸಂತ ಲಮಾಣಿ, ತಾಲೂಕು ಅಧ್ಯಕ್ಷ ಮಂಜಪ್ಪ ಹಲವಾಗಲ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಪುಷ್ಪಲತಾ, ತಾಪಂ ಇಒ ಡಾ. ವೆಂಕಟೇಶ ಸಣ್ಣಬಿದರಿ, ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ, ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ, ಬಿಇಒ ಶಾಮಸುಂದರ ಅಡಿಗ, ಕ್ಷೇತ್ರ ಸಮನ್ವಯಾಧಿಕಾರಿ ಮಂಜನಾಯ್ಕ್, ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ನಗರಸಭೆ ಮಾಜಿ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮತ್ತಿತರರಿದ್ದರು.