ಸಾರಾಂಶ
ಧರ್ಮ, ಸಮನ್ವಯತೆ, ಸಹಿಷ್ಣುತೆ, ದೇಶಭಕ್ತಿ, ಶಿಕ್ಷಣ ಮತ್ತು ಯುವಶಕ್ತಿಗಳ ಬಗ್ಗೆ ವಿಶ್ವದಲ್ಲಿ ಜಾಗೃತಿ ಮೂಡಿಸಿದ ವೀರ ವೇದಾಂತಿ ಸ್ವಾಮಿ ವಿವೇಕಾನಂದರು ಎಂದು ನಗರದ ಎಸ್‌ವಿಪಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಧರ್ಮ, ಸಮನ್ವಯತೆ, ಸಹಿಷ್ಣುತೆ, ದೇಶಭಕ್ತಿ, ಶಿಕ್ಷಣ ಮತ್ತು ಯುವಶಕ್ತಿಗಳ ಬಗ್ಗೆ ವಿಶ್ವದಲ್ಲಿ ಜಾಗೃತಿ ಮೂಡಿಸಿದ ವೀರ ವೇದಾಂತಿ ಸ್ವಾಮಿ ವಿವೇಕಾನಂದರು ಎಂದು ನಗರದ ಎಸ್‌ವಿಪಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರು. ನಗರದ ಎಸ್.ವಿ.ಪಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಎನ್.ಎಸ್.ಎಂ. ಬಾಲಿಕಾ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವೇಕಾನಂದರು ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಅಪಾರವಾದ ಅಧ್ಯಾತ್ಮಿಕ ಜ್ಞಾನ ಸಂಪಾದಿಸಿ ಅದರ ಮೂಲಕ ಜನರಲ್ಲಿ ನೆಲೆಯೂರಿದ್ದ ಧಾರ್ಮಿಕ ಅಂಧಶ್ರದ್ದೆ, ಅಜ್ಞಾನಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಆದ್ದರಿಂದ ಪ್ರತಿಯೊಬ್ಬರು ವಿವೇಕ ಮತ್ತು ಆನಂದವನ್ನು ಮೈಗೂಡಿಸಿಕೊಂಡು ರಾಷ್ಟ್ರದ ಶಕ್ತಿಗಳಾಗಿ ರೂಪುಗೊಳ್ಳಬೇಕೆಂದು ತಿಳಿಸಿದರು. ಶಿಕ್ಷಕ ಶಿವಕುಮಾರ್ ಮಾತನಾಡಿ, ವಿವೇಕಾನಂದರು ಯುವಕರ ಮತ್ತು ದೇಶದ ಅಭಿವೃದ್ದಿಗೆ ಶಿಕ್ಷಣವೇ ಮೂಲ ಮದ್ದು, ಅದನ್ನು ಸರಿಯಾದ ಸಮಯದಲ್ಲಿ ಸೂಕ್ತವಾದ ರೀತಿಯಲ್ಲಿ ಪಡೆದುಕೊಳ್ಳಬೇಕೆಂದು ಜಗತ್ತಿಗೆ ತಿಳಿಸಿಕೊಟ್ಟ ವೀರಸನ್ಯಾಸಿಯೇ ವಿವೇಕಾನಂದರು ಎಂದರು. ಈ ಸಂದರ್ಭದಲ್ಲಿ ನಮ್ಮ ಶಾಲಾ-ಕಾಲೇಜುಗಳ ಎಲ್ಲಾ ನೌಕರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.