ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಭಾರತ ದೇಶ ಜಗತ್ತಿಗೆ ಸಂಸ್ಕೃತಿ, ಪರಂಪರೆ, ಆಧ್ಯಾತ್ಮ ಹಾಗೂ ಜೀವನ ಮೌಲ್ಯಗಳನ್ನು ನೀಡಿರುವ ಶ್ರೇಷ್ಠ ದೇಶ. ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ಸಂಪನ್ಮೂಲ ಭರಿತ ಯುವಶಕ್ತಿ ದೇಶದ ಮುಂದಿನ ಭವಿಷ್ಯದ ಆಧಾರ ಶಕ್ತಿಯಾಗಿದ್ದಾರೆ. ವಿವೇಕಾನಂದರ ಜೀವನವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದೆಂದು ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ನ್ಯಾ.ಜಹೀರ ಅತನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಭಾರತ ದೇಶ ಜಗತ್ತಿಗೆ ಸಂಸ್ಕೃತಿ, ಪರಂಪರೆ, ಆಧ್ಯಾತ್ಮ ಹಾಗೂ ಜೀವನ ಮೌಲ್ಯಗಳನ್ನು ನೀಡಿರುವ ಶ್ರೇಷ್ಠ ದೇಶ. ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ಸಂಪನ್ಮೂಲ ಭರಿತ ಯುವಶಕ್ತಿ ದೇಶದ ಮುಂದಿನ ಭವಿಷ್ಯದ ಆಧಾರ ಶಕ್ತಿಯಾಗಿದ್ದಾರೆ. ವಿವೇಕಾನಂದರ ಜೀವನವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದೆಂದು ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ನ್ಯಾ.ಜಹೀರ ಅತನೂರ ಹೇಳಿದರು.ನಗರದ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಚಿಕ್ಕೋಡಿ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ-2026 ಪ್ರಯುಕ್ತ ಕಾನೂನು ಅರಿವು - ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಮತ್ತು ಶ್ರೇಷ್ಠ ಸಂತರು ನಾಡಿಗೆ ನೀಡಿದ ಕೊಡುಗೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಜನತೆ ಜೀವನದಲ್ಲಿ ಕಠಿಣ ಸವಾಲುಗಳನ್ನು ಎದುರಿಸಲು ಸದಾ ಸಕಾರಾತ್ಮಕ ಮನೋಭಾವದಿಂದ ಎಂತಹ ಸಮಸ್ಯೆಗಳನ್ನಾದರೂ ಕೂಡ ಮೆಟ್ಟಿ ನಿಲ್ಲುವ ಮೂಲಕ ಜವಾಬ್ದಾರಿಯುತ ಜೀವನದೊಂದಿಗೆ ಯಶಸ್ಸನ್ನು ಸಾಧಿಸಬೇಕೆಂದು ತಿಳಿಸಿದರು.ಅತಿಥಿ ಉಪನ್ಯಾಸ ನೀಡಿದ ವಕೀಲ ಎಂ.ಬಿ.ಪಾಟೀಲ ಮಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿರುವುದು ಅತ್ಯಂತ ಕಳವಳಕಾರಿ. ಗುರು - ಹಿರಿಯರು, ತಂದೆ - ತಾಯಿ ಜೀವನ ಮೌಲ್ಯಗಳನ್ನು ಹೇಳಿಕೊಡುವ ಎರಡು ಕಣ್ಣುಗಳಾಗಿವೆ. ವಿದ್ಯಾರ್ಥಿಗಳು ಗಾಂಭೀರ್ಯದಿಂದ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸದೆ ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಪಾಲಿಸುವುದು ಮುಖ್ಯ. ಕೇವಲ ಅಂಕ ಗಳಿಸುವುದು ಜೀವನವಲ್ಲ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಸ್ಪಷ್ಟ ಗುರಿಯೊಂದಿಗೆ ಸಾಧನೆ ಮಾಡಬೇಕೆಂದರು.ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ.ಆರ್.ಸಗರೆ ಮಾತನಾಡಿ, ವಿವೇಕಾನಂದರ ಜೀವನ ಹಾಗೂ ಅವರ ಆದರ್ಶಗಳು ಮತ್ತು ಸಾಹಿತ್ಯ ಅಧ್ಯಯನ ಮಾಡುವುದು ಮುಖ್ಯ. ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಾಜದಲ್ಲಿ ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿದಲ್ಲಿ ಯಶಸ್ಸು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಮಾತನಾಡಿ, ವಿದೇಶಿಗರು ಭಾರತೀಯರ ಬಗ್ಗೆ ತಾಳಿದ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ವಿವೇಕಾನಂದರು ಮಾಡಿದ ಚಿಕಾಗೋ ಭಾಷಣ ಅರಿವು ಮೂಡಿಸಿತು. ಸಂವಿಧಾನದ ಅರಿವು ಮತ್ತು ಕಾನೂನಿನ ಅರಿವು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕ ಎಂದರು.ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಹರಕೆ, ಬಸವರಾಜ ಮಠಪತಿ, ಕಾರ್ಯದರ್ಶಿಗಳಾದ ಆರ್.ಬಿ.ಹಿತ್ತಲಮನಿ, ಐಕ್ಯುಎಸಿ ಸಂಯೋಜಕ ಡಾ.ವಿನಾಯಕ ಮಂಜಲಾಪೂರ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಬಿ.ಸೋಲಾಪುರೆ ಮತ್ತಿತರರು ಉಪಸ್ಥಿತರಿದ್ದರು. ಪದ್ಮಶ್ರೀ ಚೌಗಲಾ ಪ್ರಾರ್ಥಿಸಿದರು, ಡಾ.ವಿನಾಯಕ್ ಮಂಜಲಾಪೂರ ಸ್ವಾಗತಿಸಿದರು, ಸಿದ್ದಣ್ಣ ನಾಯಕ ನಿರೂಪಿಸಿದರು, ಮಹೇಶ ಮದಬಾವಿ ವಂದಿಸಿದರು.