ಸಾರಾಂಶ
ಹೊಳಲ್ಕೆರೆ: ಯುವಶಕ್ತಿಯೇ ದೇಶದ ಶಕ್ತಿ ಎಂದು ಹೊಳಲ್ಕೆರೆಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಮಂಜುಳಾ ಹೇಳಿದರು.
ಹೊಳಲ್ಕೆರೆ: ಯುವಶಕ್ತಿಯೇ ದೇಶದ ಶಕ್ತಿ ಎಂದು ಹೊಳಲ್ಕೆರೆಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಮಂಜುಳಾ ಹೇಳಿದರು.
ಹೊಳಲ್ಕೆರೆಯ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಂವಾದ ಯುವ ಸಂಪನ್ಮೂಲ ಕೇಂದ್ರ ದಾವಣಗೆರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯುವಸಮೂಹ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಸಂವಿಧಾನ ಇವುಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ದೇಶವನ್ನು ಕಟ್ಟಬೇಕು ಎಂದು ಕರೆ ನೀಡಿದರು. ಪ್ಯಾನಲ್ ವಕೀಲರಾದ ಆರ್.ಹನುಮಂತಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ, ಮಹಿಳೆ ಮತ್ತು ಮಕ್ಕಳಿಗೆ, ಕಾರ್ಖಾನೆಯ ಕಾರ್ಮಿಕರಿಗೆ, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ ಮುಂತಾದವುಗಳಿಗೆ ತುತ್ತಾದವರಿಗೆ, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರಿಗೆ, ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳಗಾದವರಿಗೆ, ವಾರ್ಷಿಕ ಆದಾಯ 3 ಲಕ್ಷ ರುಪಾಯಿಗಳಿಗಿಂತ ಕಡಿಮೆ ಇರುವ ಎಲ್ಲಾ ವರ್ಗದ ಜನರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ನೀಡಲಾಗುವುದು ಎಂದು ತಿಳಿಸಿದ ಅವರು, ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾನೂನು ಸೇವೆಗಳ ಕುರಿತು ಅವರು ಉಪನ್ಯಾಸ ನೀಡಿದರು.
ಸಂವಾದ ಯುವ ಸಂಪನ್ಮೂಲ ಕೇಂದ್ರದ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ನೇತ್ರಾ ಸೂರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ಮಾರ್ಗದರ್ಶಕರಾದ ಮಂಜುನಾಥ್, ವಕೀಲರಾದ ಎಸ್.ವಿಜಯ್ ಕಾಲ್ಕೆರೆ, ಯುವಜನರು ಮತ್ತು ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬಂದಿ ವರ್ಗ, ಅರಕ್ಷಕ ಸಿಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.ಕುಮಾರಿ ದಿವ್ಯಾ ಸ್ವಾಗತಿಸಿ, ವಂದಿಸಿದರು.