ಸಾರಾಂಶ
ಯಂಗ್ ಇಂಡಿಯನ್ಸ್ ಮಂಗಳೂರು ಚಾಪ್ಟರ್ ಕೆಸಿಸಿಐ ಸಭಾಭವನದಲ್ಲಿ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಿತ್ತು. ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವಜನರು ರೂವಾರಿಗಳಾಗಬೇಕು. ಯುವಶಕ್ತಿ ಮನಸ್ಸು ಮಾಡಿದರೆ, ದೇಶದಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಯಂಗ್ ಇಂಡಿಯನ್ಸ್ ಮಂಗಳೂರು ಚಾಪ್ಟರ್ ಶುಕ್ರವಾರ ಇಲ್ಲಿನ ಕೆಸಿಸಿಐ ಸಭಾಭವನದಲ್ಲಿ ಆಯೋಜಿಸಿದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಯುವ ಸಂಸತ್‌ನಲ್ಲಿ ಭಾಗವಹಿಸಿದ ಭಾರತ್ ಅಕಾಡೆಮಿ, ನಳಂದಾ ಇಂಗ್ಲಿಷ್ ಮಾಧ್ಯಮ ಶಾಲೆ, ಮಂಗಳೂರಿನ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ನಂ.1ರ ವಿದ್ಯಾರ್ಥಿಗಳು ದೇಶದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ರಚನಾತ್ಮಕ ಚರ್ಚೆ ನಡೆಸಿದರು.ಯಂಗ್ ಇಂಡಿಯನ್ಸ್ ಮಂಗಳೂರು ಚಾಪ್ಟರ್‌ನ ನಿಕಟಪೂರ್ವ ಅಧ್ಯಕ್ಷೆ ಆತ್ಮಿಕಾ ಅಮೀನ್ ಮಾತನಾಡಿ, ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. ಹಸಿರು ಹೊದಿಕೆ ಹೆಚ್ಚಿಸಲು ಮಿಯಾವಾಕಿ ಅರಣ್ಯದಂತಹ ಪುಟ್ಟ ಪುಟ್ಟ ಅರಣ್ಯಗಳನ್ನು ನಗರದಲ್ಲಿ ಬೆಳೆಸುವ ಬಗ್ಗೆ ಯೋಚಿಸಬೇಕಾಗಿದೆ. ಸಾಮೂಹಿಕ ಅರಿವಿನಿಂದ ಪರಿಸರದ ಸುಸ್ಥಿರತೆ ಕಾಪಾಡಬಹುದು ಎಂದರು.
ಕೆಸಿಸಿಐ ಉಪಾಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್, ಸಂಘಟನೆಯ ಪ್ರಮುಖರಾದ ಆಶಿಶ್ ರೈ, ಶಿಲ್ಪಾ ಘೋರ್ಪಡೆ, ಆಶಿತ್ ಬಿ. ಹೆಗ್ಡೆ, ಶೋಹನ್ ಶೆಟ್ಟಿ, ಆಶ್ರಿಕಾ ಅಮೀನ್, ಅಜಿತ್ ಕುಮಾರ್, ಆದಿತ್ಯ ಪೈ, ಗೌರವ ಹೆಗ್ಡೆ ಇದ್ದರು.ಯಂಗ್ ಇಂಡಿಯನ್ಸ್ ಮಂಗಳೂರು ಚಾಪ್ಟರ್ ಅಧ್ಯಕ್ಷೆಸಲೋಮ್ ಲೋಬೊ ಪಿರೇರಾ ಸ್ವಾಗತಿಸಿದರು. ದುರ್ಗಾದಾಸ್ ಶೆಟ್ಟಿ ವಂದಿಸಿದರು. ದಿಶಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಹೊಣೆಗಾರಿಕೆ, ನಾಯಕತ್ವ ಗುಣಗಳು, ಪೌರತ್ವದ ಜವಾಬ್ದಾರಿ, ನೀತಿ ನಿರೂಪಣೆ ಬಗ್ಗೆ ಅರಿತುಕೊಳ್ಳಲು ನಡೆದ ಯುವ ಸಂಸತ್ ಅಧಿವೇಶನದಲ್ಲಿ 9 ರಿಂದ 12ನೇ ತರಗತಿ ವರೆಗಿನ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.