ಸಾರಾಂಶ
ಗದಗ: ಭಾರತ ಅತೀ ಹೆಚ್ಚು ಯುವಜನರನ್ನು ಹೊಂದಿದ ದೇಶವಾಗಿದ್ದು, ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಇದು ಲಾಭದಾಯಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಅನೇಕ ದುಶ್ಚಟಗಳತ್ತ ವಾಲುತ್ತಿದೆ, ಇದು ದೇಶಕ್ಕೆ ಮಾರಕವಾಗಿದ್ದು, ಯುವಜನರ ಪ್ರಗತಿಯೇ ದೇಶದ ಉನ್ನತಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಇತ್ತೀಚೆಗೆ ಜರುಗಿದ ತೋಂಟದ ಸಿದ್ಧೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಪಪೂ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ತೋಂಟದಾರ್ಯ ಮಠದ ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿವೆ. ವಿದ್ಯಾರ್ಥಿಗಳು ಸರ್ವಾಂಗೀಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಆದ್ಯತೆ ನೀಡಬೇಕಿದೆ. ಬಡವ, ಶ್ರೀಮಂತ, ಕನ್ನಡ-ಆಂಗ್ಲ ಮಾಧ್ಯಮ ಹೀಗೆ ಯಾವುದೇ ಬಗೆಯ ಕೀಳರಿಮೆಗಳಿಗೆ ಆಸ್ಪದ ನೀಡದೇ ನಮ್ಮಲ್ಲಿ ಅಡಗಿರುವ ಸಾಮರ್ಥ್ಯ ಹೊರಹಾಕುವತ್ತ ಚಿಂತನೆ ನಡೆಸಬೇಕು. ಶೈಕ್ಷಣಿಕ, ಸಾಹಿತ್ಯಿಕ-ಸಾಮಾಜಿಕವಾಗಿ ನಾಡಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಕುಮಾರವ್ಯಾಸ, ಹುಯಿಲಗೋಳ ನಾರಾಯಣರಾವ್, ಭೀಮಸೇನ ಜೋಶಿ, ಪುಟ್ಟರಾಜ ಗವಾಯಿಗಳು, ತೋಂಟದ ಸಿದ್ಧಲಿಂಗ ಶ್ರೀಗಳು ಹೀಗೆ ಅನೇಕ ಮಹಾತ್ಮರು ಗದುಗಿನ ಕೀರ್ತಿಪತಾಕೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪಸರಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ತೋಂಟದ ಸಿದ್ಧೇಶ್ವರ ಪಪೂ ಕಾಲೇಜು ಸ್ಥಾಪನೆಯಾದ ಅಲ್ಪಾವಧಿಯಲ್ಲೇ ಅತ್ಯುತ್ತಮ ಫಲಿತಾಂಶ ನೀಡಿ ಈ ಪರಿಸರದಲ್ಲಿ ತನ್ನದೇ ಹೆಸರು ಸ್ಥಾಪಿಸಿದೆ ಎಂದರು.ಡಾ. ಎಸ್.ಬಿ.ಶೆಟ್ಟರ ಮಾತನಾಡಿ, ಪಿಯುಸಿ ಹಂತ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪ್ರಮುಖ ಘಟ್ಟವಾಗಿದ್ದು, ಶ್ರದ್ಧೆ-ಪ್ರಾಮಾಣಿಕತೆಯಿಂದ ಕಲಿತರೆ ಗುರಿ ಮುಟ್ಟುವುದು ಸುಲಭವಾಗುತ್ತದೆ. ದೇಶವು ರಚನಾತ್ಮಕವಾಗಿ ಬೆಳೆಯಬೇಕಾದರೆ ವಿದ್ಯಾರ್ಥಿಗಳ ಕೊಡುಗೆ ಮಹತ್ವದ್ದಾಗಿದೆ, ಹಿಂದೆ ಗುರು ಹಾಗೂ ಮುಂದೆ ಗುರಿ ಇದ್ದರೆ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನ ತಲುಪಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಭೈರನಟ್ಟಿ-ಶಿರೋಳ ಮಠದ ಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿ, ತೋಂಟದ ಸಿದ್ಧೇಶ್ವರ ಮಹಾವಿದ್ಯಾಲಯ ಬೆಳೆದುಬಂದ ಹಾದಿ ಹತ್ತಿರದಿಂದ ಗಮನಿಸಿದ್ದು, ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು ಮಕ್ಕಳಿಗೆ ಅವಶ್ಯ ಎಂದರು.ಲೋಯೊಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿಸ್ಟರ್ ರೇನಿಟಾ ಪೀಂಟೂ, ದೈಹಿಕ ಶಿಕ್ಷಣ ಪರಿವೀಕ್ಷಕಿ ಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿದರು. ಕಳೆದ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರಾಟೆ ಹಾಗೂ ಅಣಕು ಸಂಸತ್ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ತೋಂಟದಾರ್ಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂತೋಷ ಕೊಟೆಣ್ಣವರ, ನಗೀನಾ ನದಾಫ, ಯಲ್ಲಪ್ಪ ಬಡಪ್ಪನವರ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.ಕಾಲೇಜಿನ ಪ್ರಾ.ವೈ.ಎಸ್.ಮತ್ತೂರ ಸ್ವಾಗತಿಸಿದರು. ನಯನಾ ಅಳವಂಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎನ್.ವಿ. ಕಡಗದ ನಿರೂಪಿಸಿದರು. ಶಿಲ್ಪಾ ಪಾಟೀಲ ವಂದಿಸಿದರು.