ಯುವಕನ ಕೈ ಕತ್ತರಿಸಿದ ಪ್ರಕರಣ: ಆರೋಪಿಗಳ ಬಂಧನಕ್ಕೆ ಮನವಿ

| Published : Jul 26 2024, 01:33 AM IST

ಯುವಕನ ಕೈ ಕತ್ತರಿಸಿದ ಪ್ರಕರಣ: ಆರೋಪಿಗಳ ಬಂಧನಕ್ಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಭೀಮನಗರದ ಪರಿಶಿಷ್ಟಜಾತಿ ಕಸಬಾ ಮನೆ ಯಜಮಾನರು ದಲಿತ ಯುವಕನ ಕೈ ಕತ್ತರಿಸಿದ ಪ್ರಕರಣ ಖಂಡಿಸಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕನಕಪುರ ತಾಲೂಕಿನ ಮಳಗಾಳು ಗ್ರಾಮದ ದಲಿತ ಯುವಕ ಅನೀಶ್ ಅವರ ಎಡಗೈ ಕತ್ತರಿಸಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಕಾನೂನಿನಡಿ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿ ಗುರುವಾರ ಪಟ್ಟಣದ ಭೀಮನಗರದ ಪರಿಶಿಷ್ಟಜಾತಿ ಕಸಬಾ ಮನೆ ಯಜಮಾನರು ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿ ಪತ್ರವನ್ನು ಉಪವಿಭಾಗಾಧಿಕಾರಿಗೆ ನೀಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರದ ಕನಕಪುರ ವಿಧಾನಸಭೆಗೆ ಸೇರಿದ ಮಳಗಾಳು ಗ್ರಾಮದಲ್ಲಿ ಜು.21ರಂದು ರಾತ್ರಿ ರಸ್ತೆಯಲ್ಲಿ ಇನ್ನೊಬ್ಬರೊಂದಿಗೆ ಮಾತನಾಡುತ್ತಿದ್ದ ಗಾಯಾಳು ಅನೀಶ್ ಜತೆ ತೀಟೆ ಜಗಳ ತೆಗೆದ ಗುಂಪೊಂದರ ರೌಡಿ ಶೀಟರ್ ಹರ್ಷ ಅಲಿಯಾಸ್ ಕೈಮ ಎಂಬಾತ ಹಾಗೂ ಆತನ ಇತರ ಸಹಚರರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಎಡಗೈ ಕತ್ತರಿಸಿದೆ. ಇಂತಹ ಪ್ರಕರಣ ಖಂಡನೀಯ.

ಗಲಾಟೆ ವೇಳೆ ಗಾಯಾಳು ಅನೀಶ್ ಕುಟುಂಬದ ಲಕ್ಷ್ಮಣ್, ಗೋವಿಂದರಾಜು ಹಾಗೂ ಇತರ ಮಹಿಳೆಯರಿಗೆ ರೌಡಿ ಶೀಟರ್ ಗುಂಪು ಅಮಾನವಿಯವಾಗಿ ಹಲ್ಲೆ ಮಾಡಿದ್ದು, ಇದು ನಾಗರೀಕ ಸಮಾಜ ತಲೆತಗ್ಗಿಸುವ ಕೆಲಸ. ಹಾಗಾಗಿ ಕೋಮು ಸೌಹಾರ್ಧತೆಗೆ ಧಕ್ಕೆ ತಂದು, ದಲಿತ ಸಮಾಜದ ಸಂತ್ರಸ್ತ ಗಾಯಾಳು ಅನೀಶ್ ಮತ್ತು ಕುಟುಂಬಕ್ಕೆ ಭಯ ಭೀತಿ ಉಂಟು ಮಾಡಿರುವುದು ಸರಿಯಲ್ಲ. ಇದು ಅಕ್ಷಮ್ಯ, ಘಟನೆಯಿಂದ ಮಳಗಾಳು ಗ್ರಾಮದಲ್ಲಿಯೂ ಕೂಡ ಆತಂಕ ಹುಟ್ಟಿಸಿದ್ದು ಕೂಡಲೆ ಆರೋಪಿ ಬಂಧನಕ್ಕೆ ಸರ್ಕಾರ ಕ್ರಮಕೈಗೊಳ್ಳದ ಪಕ್ಷದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಘಟನೆ ಸ್ವರೂಪ ಅರಿತು ಪೊಲೀಸ್ ಇಲಾಖೆ ತಕ್ಷಣ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕು ಎಂದ ಮನವಿ ಸಲ್ಲಿಸಿದರು.

ಈ ಘಟನೆ ಬಗ್ಗೆ ಸರ್ಕಾರ, ಪೊಲೀಸ್ ಇಲಾಖೆ ನಿರ್ಲಕ್ಷ್ಯತಾಳಿದಲ್ಲಿ ಕೊಳ್ಳೇಗಾಲದ ಪ್ರಗತಿಪರ ಹಾಗೂ ಅಂಬೇಡ್ಕರ್ ಸಂಘದ ವತಿಯಿಂದ ಕನಕಪುರದತನಕ ಪಾದಯಾತ್ರೆ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಬೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಯಜಮಾನರಾದ ಎಂ.ಸಿದ್ದಾರ್ಥ, ಎಂ.ಪಾಪಣ್ಣ, ಕುಮಾರ್, ಎಸ್.ರಾಜಶೇಖರಮೂರ್ತಿ, ನಾಗೇಶ್, ಸನತ್ ಕುಮಾರ್, ಶಿವಪ್ಪ ಇನ್ನಿತರರಿದ್ದರು.