ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಕ್ಷಣಿಕ ಸುಖದ ಭ್ರಮೆಯಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ತಮಗೆ ಅರಿವಿಲ್ಲದಂತೆ ಬದುಕನ್ನು ನಾಶ ಮಾಡಿಕೊಳ್ಳುತ್ತಿರುವುದು ಸಾಮಾಜಿಕ ದುರಂತವಾಗಿದೆ
ಕುಷ್ಟಗಿ: ಸದೃಢ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದ್ದು, ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಚುಟುಕು ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಮಹೇಶ ಹಡಪದ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಧರ್ಮಸ್ಥಳ ಯೋಜನೆಯ ಮೂಲಕ ಶಾಲಾ ಕಾಲೇಜು ಮಟ್ಟದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಯುವ ಜನರಲ್ಲಿ ಜಾಗೃತಿ ಮೂಡಿಸುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ. ಮಾದರಿ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದರು.
ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಕ್ಷಣಿಕ ಸುಖದ ಭ್ರಮೆಯಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ತಮಗೆ ಅರಿವಿಲ್ಲದಂತೆ ಬದುಕನ್ನು ನಾಶ ಮಾಡಿಕೊಳ್ಳುತ್ತಿರುವುದು ಸಾಮಾಜಿಕ ದುರಂತವಾಗಿದೆ ಎಂದರು.ಜನಜಾಗೃತಿ ವೇದಿಕೆಯ ಮುಖ್ಯಸ್ಥ ವಿರೇಶ ಬಂಗಾರಶೆಟ್ಟರ ಸ್ವಾಸ್ಥ್ಯ ಸಂಕಲ್ಪದ ಕುರಿತು ಪ್ರತಿಜ್ಞಾ ವಿಧಿ ಭೋಧಿಸಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ಯುವ ಜನಾಂಗ ಅಡ್ಡ ದಾರಿ ಹಿಡಿಯುತ್ತಿದೆ.ಇಂತಹ ಸಂದರ್ಭದಲ್ಲಿ ಯಾವುದೇ ದುಶ್ಚಟಗಳಿಗೆ ವಿದ್ಯಾರ್ಥಿಗಳು ಬಲಿಯಾಗದೆ ಸ್ವಾಸ್ಥ್ಯ ಸದೃಢ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಪ್ರಜ್ಞಾವಂತ ಯುವಕರು ದುಶ್ಚಟಗಳಿಗೆ ದಾಸರಾಗದೆ ಎಚ್ಚರಿಕೆಯಿಂದ ಇರಬೇಕು ಹಾಗೂ ಇದರ ಬಗ್ಗೆ ಪ್ರತಿಯೊಬ್ಬರು ಅರಿತುಕೊಂಡು ಸುತ್ತಮುತ್ತಲಿನಲ್ಲಿರುವ ಮಾದಕ ವಸ್ತುಗಳ ಸೇವನೆ ಮಾಡುವವರಿಗೆ ಅರಿವು ಮೂಡಿಸಿ ಸಮಾಜವನ್ನು ರೋಗ ಮುಕ್ತವನ್ನಾಗಿ ಮಾಡಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಭೋಜರಾಜ ಅಧ್ಯಕ್ಷತೆ ವಹಿಸಿದ್ದರು. ಅನಿತಾ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಮಂಜುಳಾ, ವಿಶ್ವನಾಥ ಕೋಳೂರು, ದುರ್ಗೇಶ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.