ಯುವಸಮೂಹ ಶರಣಸಂಸ್ಕೃತಿಯಿಂದ ವಿಮುಖ ಕಳವಳಕಾರಿ: ನ್ಯಾಯವಾದಿ ಎನ್.ವಿ.ಬಿರಾದಾರ್

| Published : Jul 22 2025, 12:00 AM IST

ಸಾರಾಂಶ

ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗಿ ಶರಣ ಸಂಸ್ಕೃತಿಯಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ನ್ಯಾಯವಾದಿ ಎನ್.ವಿ. ಬಿರಾದಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಔರಾದ್

ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗಿ ಶರಣ ಸಂಸ್ಕೃತಿಯಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ನ್ಯಾಯವಾದಿ ಎನ್.ವಿ. ಬಿರಾದಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಅಮರೇಶ್ವರ ಕಾಲೇಜು ಹತ್ತಿರದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ ಮನೆಗೊಂದು ಅನುಭವ ಮಂಟಪ ಮಾಸಿಕ ಸಮಾರಂಭದಲ್ಲಿ ಮಾತನಾಡಿ, ಕಂಪ್ಯೂಟರ್ ಯುಗದಲ್ಲಿ ಯುವ ಸಮುದಾಯ ದಾರಿ ತಪ್ಪುತ್ತಿದೆ ಎಂಬ ಆತಂಕ ಹೆಚ್ಚಿದೆ. ಮೊಬೈಲ್ ಗೀಳು, ದುಶ್ಚಟಕ್ಕೆ ದಾಸರಾಗುವ, ಕ್ಷಣಿಕ ಆಸೆಗೆ ಆಕರ್ಷಿತರಾಗಿ ಜೀವನವೇ ಹಾಳು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಾರ್ಗದರ್ಶಕರ ಅಗತ್ಯ ಎದ್ದು ಕಾಣಿಸುತ್ತಿದೆ ಎಂದರು.

ಸೂಕ್ತ ಶಿಕ್ಷಣ ನೀಡಿ, ಶರಣ ಸಂಸ್ಕೃತಿ ಹಾಗೂ ಬದುಕಿನ ಮೌಲ್ಯಗಳು ಕಲಿಸಿ ಅವರನ್ನು ಸರಿದಾರಿಗೆ ತರುವ ಕೆಲಸದ ತುರ್ತು ಅಗತ್ಯವಿದೆ. ಇಂದಿನ ಯುವ ಶಕ್ತಿ ದೇಶದ ಶಕ್ತಿ. ಅದನ್ನು ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಪ.ಪಂ.ಅಧ್ಯಕ್ಷೆ ಸರುಬಾಯಿ ಘುಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಸುಭಾಷ್‌ ಮೀಸೆ ಧ್ವಜಾರೋಹಣ ನೆರವೇರಿಸಿದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಅಮೃತರಾವ್‌ ಬಿರಾದಾರ, ಬಸವ ಕೇಂದ್ರದ ಅಧ್ಯಕ್ಷ ಜಗನ್ನಾಥ ಮೂಲಗೆ, ನಾಗನಾಥ ಅಣದೂರೆ, ಕಸಾಪ ಯುವ ಘಟಕದ ಅಧ್ಯಕ್ಷ ಅಂಬಾದಾಸ ನಳಗೆ ಸೇರಿದಂತೆ ಇನ್ನಿತರರಿದ್ದರು.