ಸಾರಾಂಶ
ಯುವ ಸಮುದಾಯ ಆಧುನಿಕವಾಗಿ ಎಷ್ಟೇ ಮುಂದುವರಿಯಲಿ. ಆದರೆ ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಮರೆಯಬಾರದೆಂದು ಕಸಾಪ ತಾಲೂಕು ಅಧ್ಯಕ್ಷ ಪ್ರೊ. ಬಿ.ಸಿ. ಹನಮಂತಗೌಡ್ರ ಹೇಳಿದರು.
ನರಗುಂದ: ಯುವ ಸಮುದಾಯ ಆಧುನಿಕವಾಗಿ ಎಷ್ಟೇ ಮುಂದುವರಿಯಲಿ. ಆದರೆ ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಮರೆಯಬಾರದೆಂದು ಕಸಾಪ ತಾಲೂಕು ಅಧ್ಯಕ್ಷ ಪ್ರೊ. ಬಿ.ಸಿ. ಹನಮಂತಗೌಡ್ರ ಹೇಳಿದರು.
ಅವರು ತಾಲೂಕಿನ ಬನಹಟ್ಟಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಪ್ರಸಕ್ತ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಇಂದು ಯುವ ಜನಾಂಗ ಆಧುನಿಕತೆಯ ಗೀಳಿನಲ್ಲಿ ನಮ್ಮ ಸಂಸ್ಕೃತಿ -ಸಂಪ್ರದಾಯಗಳಿಗೆ ವಿಮುಖರಾಗಿ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಇಂದಿನ ಬಹಳಷ್ಟು ಯುವ ಜನಾಂಗ ಸಾಮಾಜಿಕ ಜಾಲತಾಣವೆಂಬ ಮಾಯಾಲೋಕದಲ್ಲಿ ಮುಳುಗಿದ್ದು ಅದರಿಂದ ಹೊರಬಂದು ಚೆನ್ನಾಗಿ ಓದಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ನಿವೃತ್ತ ಪ್ರಾಚಾರ್ಯರಾದ ಪ್ರೊ ಕೆ.ಎಂ. ಹುದ್ದಾರ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ, ಕಲಿಸಿದ ಗುರುಗಳಿಗೆ ವಿಧೇಯರಾಗಿ, ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಂಡರೆ ಸಾಕು ಇದಕ್ಕಿಂತ ಖುಷಿ ಬೇರೊಂದಿಲ್ಲ ಎಂದು ಹೇಳಿದರು.ಪ್ರಾಚಾರ್ಯ ಸಿ.ಜಿ.ಖಾನಾಪೂರ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಈ ಸಂದರ್ಭದಲ್ಲಿ ಎಸ್.ವೈ. ಪಾಟೀಲ, ರೂಪಾ ಪಾಟೀಲ, ಅಂಜನಾದೇವಿ ಓಜನಳ್ಳಿ, ಬಸಮ್ಮ ಪಾಟೀಲ, ಪುಷ್ಪಲತಾ ವೀರಾಪೂರ, ಎನ್.ವೈ.ತಹಸೀಲ್ದಾರ ಇದ್ದರು.ಲಕ್ಷ್ಮೀ ಕುರಿ ಸ್ವಾಗತಿಸಿದರು. ರೂಪಾ ಉಳ್ಳಾಗಡ್ಡಿ ಕಾರ್ಯಕ್ರಮ ನಿರೂಪಿಸಿದರು.