ಸಾರಾಂಶ
ಸಮಾಜದಲ್ಲಿ ಉಳ್ಳವರು ಮತ್ತು ಬಡವರ ಅಂತರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದಕ್ಕೆ ಕಾರಣವನ್ನು ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಅಧ್ಯಯನ ಮಾಡುವ ಮೂಲಕ ಅನಾವರಣ ಮಾಡಬೇಕು. ನಾನು ಕೂಡ ಒಂದು ಕಾಲದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಯಾಗಿದ್ದೆ. ಈ ಕಾಲೇಜು ನನ್ನ ಅಂತರಾಳದ ಶಕ್ತಿಯನ್ನು ಹೊರಹೊಮ್ಮಿಸಿ ಶಾಸಕನನ್ನಾಗಿ ರೂಪಿಸಿದೆ. ನೀವು ಕೂಡ ಭವಿಷ್ಯದಲ್ಲಿ ನಾಯಕತ್ವವನ್ನು ಪಡೆಯಬಹುದು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಉತ್ತಮ ರಾಷ್ಟ್ರ ಕಟ್ಟುವ ಕೆಲಸದಲ್ಲಿ ಯುವಕರು ಸಕ್ರಿಯವಾಗುವ ಜೊತೆಗೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಕಾಲ ಬದಲಾಗಿದೆ. ರಾಷ್ಟ್ರೀಯ ಸೇವಾ ಯೋಜನೆ ಕಲ್ಪನೆ ಬದಲಾಗಬೇಕು. ಸ್ವಚ್ಛತೆ ಹಾಗೂ ಅರಿವು ಮೂಡಿಸುವ ಜೊತೆಗೆ ಬಡಜನರ ದೈನಂದಿನ ಬದುಕನ್ನು ಅಭ್ಯಾಸ ಮಾಡಬೇಕು ಎಂದರು.
ಸಮಾಜದಲ್ಲಿ ಉಳ್ಳವರು ಮತ್ತು ಬಡವರ ಅಂತರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದಕ್ಕೆ ಕಾರಣವನ್ನು ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಅಧ್ಯಯನ ಮಾಡುವ ಮೂಲಕ ಅನಾವರಣ ಮಾಡಬೇಕು. ನಾನು ಕೂಡ ಒಂದು ಕಾಲದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಯಾಗಿದ್ದೆ. ಈ ಕಾಲೇಜು ನನ್ನ ಅಂತರಾಳದ ಶಕ್ತಿಯನ್ನು ಹೊರಹೊಮ್ಮಿಸಿ ಶಾಸಕನನ್ನಾಗಿ ರೂಪಿಸಿದೆ. ನೀವು ಕೂಡ ಭವಿಷ್ಯದಲ್ಲಿ ನಾಯಕತ್ವವನ್ನು ಪಡೆಯಬಹುದು ಎಂದು ತಿಳಿಸಿದರು.ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಮಾತನಾಡಿ, ಭವಿಷ್ಯದ ಬದುಕನ್ನು ನಾಯಕತ್ವದ ಅಡಿಯಲ್ಲಿ ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗಿದೆ. ಗ್ರಾಮದ ಸಂಪೂರ್ಣ ಸ್ವಚ್ಛತೆಯನ್ನು ನಮ್ಮ ವಿದ್ಯಾರ್ಥಿಗಳು ಮಾಡಲಿದ್ದಾರೆ ಎಂದರು.
ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಆರ್ಥಿಕ ಸೌಲಭ್ಯಗಳು ಸರಕಾರದಿಂದ ಸಕಾಲಕ್ಕೆ ದೊರಕುತ್ತಿವೆಯಾ? ಎಂಬುದರ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಎಲ್ಲರೂ ಕೂಡ ಗ್ರಾಮಾಂತರ ಪ್ರದೇಶದ ಮಕ್ಕಳು. ಅವರಿಗೂ ಕೂಡ ಗ್ರಾಮದ ಜೀವನ ಒಗ್ಗಿಹೋಗಿದೆ. ಜನರು ನಮ್ಮ ವಿದ್ಯಾರ್ಥಿಗಳಿಂದ ಸಂಪೂರ್ಣ ಕೆಲಸವನ್ನು ಮಾಡಿಸುವ ಜೊತೆಗೆ ನಿಮ್ಮ ಮಕ್ಕಳಂತೆ ಅವರನ್ನು ಪ್ರೀತಿಸಬೇಕು ಎಂದು ಮನವಿ ಮಾಡಿದರು.ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ. ಮಂಜುನಾಥ್ ಮಾತನಾಡಿ, ಬೂಕನಕೆರೆ ಗ್ರಾಮವು ವಿಶ್ವದ ಭೂಪಟದಲ್ಲಿ ಕಂಗೊಳಿಸುತ್ತಿದೆ. ಈ ಗ್ರಾಮದಲ್ಲಿ ಹುಟ್ಟಿ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿರುವ ಯಡಿಯೂರಪ್ಪನವರ ಆಶಯಗಳ ಈಡೇರಿಕೆಗೆ ನಮ್ಮ ವಿದ್ಯಾರ್ಥಿಗಳು ಕಟಿಬದ್ಧರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಶ್ಯಾಮಸುಂದರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೆಟ್ಟದ ಹೊಸೂರು ಪ್ರಕಾಶ್, ಗಂಜಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುರುಬಹಳ್ಳಿ ನಾಗೇಶ್, ಡೇರಿ ಅಧ್ಯಕ್ಷ ನಾಗೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಣ್ಣೇನಹಳ್ಳಿ ಧನಂಜಯ, ವಿಎಸ್‌ಎಸ್‌ಎನ್ ನಿರ್ದೇಶಕರಾದ ಜ್ಞಾನೇಂದ್ರ, ಮಾನು, ಕಾಲೇಜಿನ ಹಿರಿಯ ಸಹಪ್ರಾಧ್ಯಾಪಕ ಡಾ. ಸಿ ರಮೇಶ್, ಡಾ ಜಯಕೀರ್ತಿ, ಎನ್.ಎಸ್.ಎಸ್ ಅಧಿಕಾರಿಗಳಾದ ಬೂವನಹಳ್ಳಿ ಪ್ರಕಾಶ್, ಪುಷಲತಾ, ಸಹ ಶಿಬಿರ ಅಧಿಕಾರಿಗಳಾದ ಕಿರಣ್, ಆನಂದ್, ಐಕ್ಯುಎಸಿ ಸಂಚಾಲಕ ಉಮೇಶ್, ಗ್ರಂಥಪಾಲಕ ಅರುಣ್ ಕುಮಾರ್, ಪ್ರಾಧ್ಯಾಪಕರಾದ ಮುನಿಕೃಷ್ಣ, ಸುರೇಶ್, ರಘು, ಉಪನ್ಯಾಸಕರಾದ ವೀಣಾ, ಅನಿತಾ, ಶೃತಿ ಇದ್ದರು.