ಯುವಕರು ರಾಷ್ಟ್ರದ ಹಿತ ಕಾಯುವ ದೇಶಭಕ್ತರಾಗಬೇಕು-ರಾಜಶೇಖರಗೌಡ

| Published : Jul 10 2024, 12:31 AM IST

ಯುವಕರು ರಾಷ್ಟ್ರದ ಹಿತ ಕಾಯುವ ದೇಶಭಕ್ತರಾಗಬೇಕು-ರಾಜಶೇಖರಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರು ಉತ್ತಮ ಹವ್ಯಾಸಗಳ ಮೂಲಕ ಶಾರೀರಿಕ ಮಾನಸಿಕ ಬೌದ್ಧಿಕ ಹಿತ ಚಿಂತನೆಗೆ ಮುಂದಾಗುವ ಮೂಲಕ ರಾಷ್ಟ್ರದ ಹಿತ ಕಾಯುವ ದೇಶಭಕ್ತರಾಗಬೇಕು ಎಂದು ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರ ಕರೆ ನೀಡಿದರು.

ಹಾನಗಲ್ಲ: ಯುವಕರು ಉತ್ತಮ ಹವ್ಯಾಸಗಳ ಮೂಲಕ ಶಾರೀರಿಕ ಮಾನಸಿಕ ಬೌದ್ಧಿಕ ಹಿತ ಚಿಂತನೆಗೆ ಮುಂದಾಗುವ ಮೂಲಕ ರಾಷ್ಟ್ರದ ಹಿತ ಕಾಯುವ ದೇಶಭಕ್ತರಾಗಬೇಕು ಎಂದು ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರ ಕರೆ ನೀಡಿದರು.ಹಾನಗಲ್ಲಿನ ರೋಶನಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಯುವ ಸಂಗಮ ಹಾಗೂ ರೋಶನಿ ಸಮಾಜ ಸೇವಾ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ತಮ್ಮ ಶಾರೀರಿಕ ಸಾಮರ್ಥ್ಯ ಬೆಳೆಸಿಕೊಳ್ಳಲು ಮತ್ತು ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಸಮಾಜಮುಖಿಯಾಗಲು ಯುವ ಸಂಗಮ ಉತ್ತಮ ವೇದಿಕೆಯಾಗಿದೆ. ಅನಗತ್ಯ ಕಾಲ ಹರಣಕ್ಕೆ ಅವಕಾಶವಿಲ್ಲದಂತೆ ಒಳ್ಳೆಯದನ್ನು ರೂಢಿಸಿಕೊಳ್ಳುವ ಇಚ್ಛಾಶಕ್ತಿ ಯುವಕರದ್ದಾಗಲಿ. ಉತ್ತಮ ಭವಿಷ್ಯಕ್ಕಾಗಿ ಆಟ ಪಾಠದ ಮೂಲಕ ಹಿರಿಯರ ಮಾರ್ಗದರ್ಶನವೂ ಇರಲಿ. ನಾಳೆಗಳು ಅತ್ಯಂತ ಸ್ಪರ್ಧಾತ್ಮಕವಾಗಿದ್ದು ಎಲ್ಲವನ್ನೂ ಎದುರಿಸಿ ಬದುಕು ಕಟ್ಟಿಕೊಳ್ಳಲು ಮುಂದಾಗಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇರುವ ಯುವಕರನ್ನು ಗುರುತಿಸಿ ಸಂಘಗಳ ರಚನೆ ಮಾಡುವುದರೊಂದಿಗೆ ಅವರಿಗೆ ಬೇಕಾದ ಸೂಕ್ತ ಮಾರ್ಗದರ್ಶನ ನೀಡಲು ಯುವ ಸಂಗಮ ಕಾರ್ಯ ನಿರ್ವಹಿಸುತ್ತಿರುತ್ತದೆ. ತಾಲೂಕಿನ ಬೇರೆ ಬೇರೆ ಹಳ್ಳಿಗಳಲ್ಲಿ ಯುವಕ ಸಂಘಗಳನ್ನು ಪ್ರಾರಂಭಿಸಿ ಅವರಿಗೆ ಕಾನೂನು ತರಬೇತಿ, ಮಾನವ ಹಕ್ಕು ಸಂವಾದಂತಹ ಸಂವಿಧಾನ ಬದ್ಧ ಹಕ್ಕು ಆಧಾರಿತ ತರಬೇತಿಗಳನ್ನು ನೀಡಿ ಸಮುದಾಯದಲ್ಲಿ ಸಮರ್ಥರನ್ನಾಗಿ ಮಾಡಲಾಗುತ್ತಿದೆ. ಅವರ ಪ್ರತಿಭೆಗಳನ್ನು ಗುರತಿಸಲು ವಾಲಿಬಾಲನಂತಹ ಪಂದ್ಯಾವಳಿಗಳನ್ನು ಆಯೋಜಿಸಿ ಕ್ರೀಡಾ ಸ್ಫೂರ್ತಿ ಬೆಳೆಸಿ ಗೌರವಿಸಲಾಗುತ್ತದೆ ಎಂದರು.ಪಂದ್ಯಾವಳಿಯಲ್ಲಿ ಆಲದಕಟ್ಟಿಯ ಭ್ರಷ್ಟಾಚಾರ ನಿರ್ಮೂಲನಾ ಸಂಘ ಪ್ರಥಮ ಬಹುಮಾನದ ರು. ೫೦೦೦ ಮತ್ತು ಟ್ರೋಫಿ, ಶಿವಪುರದ ಟಿಪ್ಪು ಸುಲ್ತಾನ ಸಂಘ ದ್ವಿತೀಯ ಬಹುಮಾನದ ರು. ೩೦೦೦ ಮತ್ತು ಟ್ರೋಫಿ, ನಿಟಗಿನಕೊಪ್ಪ ಬಸವೇಶ್ವರ ಸಂಘ ತೃತೀಯ ಬಹುಮಾನ ರು. ೨೦೦೦ ಮತ್ತು ಟ್ರೋಫಿ ಪಡೆದುಕೊಂಡರು.ಜನವೇದಿಕೆ ಮುಖಂಡ ಬಸವರಾಜ ಕೋತಂಬ್ರಿ, ಸತೀಶ ಅಂಕೋಲೆ, ಕಲೀಂ ಮಾಸನಕಟ್ಟಿ, ಯುವ ಸಂಗಮದ ಪ್ರತಿನಿಧಿ ನಿಸ್ಸೀಮಪ್ಪ ಹಿತ್ತಲಮನಿ, ನಿಟಗಿನಕೊಪ್ಪ ಗ್ರಾಮದ ಹಳ್ಳಿ ಅಭಿವೃಧ್ಧಿ ಸಮಿತಿ ಸದಸ್ಯ ಪ್ರಕಾಶ ಅರಳೇಶ್ವರ ಮಾತನಾಡಿದರು.ಕಾರ್ಯಕ್ರಮದಲ್ಲಿ ನ್ಯಾಯವಾದಿ ವೆರೋನಿಕಾ, ರೋಶನಿ ಜಾನೇಟ್, ಸಂಸ್ಥೆಯ ಸಹ ನಿರ್ದೇಶಕಿ ಶಾಂತಿ ಡಿಸೋಜಾ, ಎಸ್.ಟಿ. ಯುವ ಮೋರ್ಚಾದ ಅಧ್ಯಕ್ಷ ಪ್ರಕಾಶ ನಂದಿಕೊಪ್ಪ, ಕೆ.ಎಫ್. ನಾಯ್ಕರ, ಡಾ.ಎಂ. ಪ್ರಸನ್ನಕುಮಾರ, ಶಿವಕುಮಾರ ಮಾಂಗ್ಲೇನವರ, ಡಿಗ್ಗಪ್ಪ ಲಮಾಣಿ, ಎಸ್.ವಿ. ಪಾಟೀಲ್, ಮಂಜುನಾಥ ಗೌಳಿ, ಪ್ರವೀಣ ಮಾಂಗ್ಲೇನವರ, ಮಂಜುನಾಥ ಹೊಟ್ಟೆಗೌಡ್ರ ಪಾಲ್ಗೊಂಡಿದ್ದರು.