ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ವೈಯುಕ್ತಿಕ ಸುಖದ ತ್ಯಾಗ, ದೃಢಸಂಕಲ್ಪ, ಕಠಿಣ ಪರಿಶ್ರಮ ಇದ್ದರೆ ಯಾರು ಬೇಕಾದರೂ ಯಶಸ್ಸು ಸಾಧಿಸಬಹುದು. ಇದಕ್ಕೆ ಮಾನಸಿಕವಾಗಿ ಪಕ್ವವಾಗಿರಬೇಕು. ಯುವಕರು ಜ್ಞಾನದ ಮೂಲಕ ಮಹಾನ್ ಸಾಧನೆ ಮಾಡುವ ಕನಸು ಕಾಣಬೇಕು ಎಂದು ಬೆಂಗಳೂರು, ದೆಹಲಿಯ ಇನ್ಸೈಟ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀರೂರು
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ವೈಯುಕ್ತಿಕ ಸುಖದ ತ್ಯಾಗ, ದೃಢಸಂಕಲ್ಪ, ಕಠಿಣ ಪರಿಶ್ರಮ ಇದ್ದರೆ ಯಾರು ಬೇಕಾದರೂ ಯಶಸ್ಸು ಸಾಧಿಸಬಹುದು. ಇದಕ್ಕೆ ಮಾನಸಿಕವಾಗಿ ಪಕ್ವವಾಗಿರಬೇಕು. ಯುವಕರು ಜ್ಞಾನದ ಮೂಲಕ ಮಹಾನ್ ಸಾಧನೆ ಮಾಡುವ ಕನಸು ಕಾಣಬೇಕು ಎಂದು ಬೆಂಗಳೂರು, ದೆಹಲಿಯ ಇನ್ಸೈಟ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಭಾನುವಾರ ತಾಲೂಕು ಆಡಳಿತ ಮತ್ತು ಬಿಸಿಎಂ ಇಲಾಖೆಯಿಂದ ಇನ್ಸೈಟ್, ಐಎಎಸ್, ಕೆಎಎಸ್ ಬೆಂಗಳೂರು, ದೆಹಲಿ ಕೋಚಿಂಗ್ ವತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉಚಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೃಢ ಮನಸ್ಸಿನಿಂದ ಸಾಧನೆ ಮಾಡುವವರಿಗೆ ಅಸಾಧ್ಯವಾದುದ್ದು ಯಾವುದೂ ಇಲ್ಲ, ಸಾಧಿಸುವ ಛಲವಿರಬೇಕಷ್ಟೆ, ಸೋತರೆ ಕುಗ್ಗದೆ ಮತ್ತೆ ಪ್ರಯತ್ನ ಮಾಡಿದರೆ ಸೋಲೂ ಗೆಲುವಾಗಿ ಪರಿವರ್ತಗೊಳ್ಳುತ್ತದೆ. ಯಾವ ವಿಷಯವನ್ನು ಎಷ್ಟು ಓದಬೇಕು ಎನ್ನುವುದು ಎಷ್ಟು ಮುಖ್ಯವೋ, ಯಾವ ವಿಷಯವನ್ನು ಓದಬಾರದು ಎಂಬುದರ ಅರಿವು ಅಗತ್ಯ. ಸ್ಪರ್ಧಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಸಮಯ ನಿರ್ವಹಣೆಯ ತಂತ್ರವನ್ನು ರೂಪಿಸಿಕೊಂಡರೆ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ. ಸಕಾರಾತ್ಮಕ ಮನೋಭಾವದಿಂದ ಹೋರಾಡಿದರೆ ಬದುಕಿನ ಪ್ರತಿಯೊಂದು ಹಂತದಲ್ಲೂ ಸಾಧನೆ ಸಾಧ್ಯ ಎಂದರು.ಪುಸ್ತಕಗಳನ್ನು ಸ್ನೇಹಿತರನ್ನಾಗಿಸಿಕೊಂಡು ಓದಿದ ಅನೇಕ ಹಿರಿಯರು ಪ್ರಪಂಚದಲ್ಲಿ ಅನೇಕ ಸಾಧನೆಗಳನ್ನು ಮಾಡಿರುವ ನಿದರ್ಶನಗಳಿವೆ. ಇದರ ಜೊತೆ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯದಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು, ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇರುವ ಸಂಪನ್ಮೂಲವನ್ನು ತನ್ನ ಏಳಿಗೆಗಾಗಿ ಉಪಯೋಗಿಸಿಕೊಂಡು ಚಾಕಚಕ್ಯತೆಯಿಂದ ಬುದ್ದಿಯನ್ನು ಬೆಳೆಸಿಕೊಂಡು ಓದಿನತ್ತ ಪರಿಶ್ರಮವಿಟ್ಟಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮ ಮಾತನಾಡಿ, ಗುರಿ ದೊಡ್ಡದಾದಷ್ಟೂ ಶಿಸ್ತು, ಸಮಯ ನಿರ್ವಹಣೆ, ನಿತ್ಯದ ಅಧ್ಯಯನ ಅಭ್ಯಾಸವೂ ಗಟ್ಟಿಯಾಗಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕೇವಲ ಜ್ಞಾನದಿಂದ ಮಾತ್ರವಲ್ಲ, ಆತ್ಮವಿಶ್ವಾಸ ಮತ್ತು ಮನೋಬಲದಿಂದಲೂ ಬರುತ್ತದೆ ಎಂದರು.ಕಡೂರು ಸಿಪಿಐ ಎಂ.ರಫೀಕ್ ಮಾತನಾಡಿ, ವಿದ್ಯಾರ್ಥಿಗಳು ಓದುವ ವಯ್ಯಸ್ಸಿನಲ್ಲಿ ಓದಿ ಮುಗಿಸಬೇಕು. ಶಿಸ್ತು ರೂಢಿಸಿಕೊಂಡು ಜೀವನಶೈಲಿ ಬದಲಾಗಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದು, ಈಗಿನ ಕಾಲಕ್ಕೆ ಅಗತ್ಯವಾಗಿ ನಡೆಸುತ್ತಿರುವ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಬುದ್ಧಿವಂತಿಕೆಯಿAದ ತಯಾರಾಗಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದ ದುರಂತದ ಸಂಗತಿಯಾಗಿದ್ದು, ಕಡೂರು ತಾಲೂಕಿನಲ್ಲೇ ಸುಮಾರು 2500 ಜನ ಬಲಿಯಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಸ್.ಎಸ್.ದೇವರಾಜ್ ಮಾತನಾಡಿದರು, ಕಡೂರು ಬಿಇಒ ತಿಮ್ಮಯ್ಯ, ಪ್ರಾಂಶುಪಾಲ ದೊರೇಶ್ ಮಾತನಾಡಿದರು.ತಾಲೂಕಿನ ವಿವಿಧ ಬಿಸಿಎಂ ಹಾಸ್ಟೆಲ್ ನ ಸುಮಾರು ಸಾವಿರಕ್ಕು ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ನಿಲಯಪಾಲಕರು, ಸಿಬ್ಬಂದಿ ಭಾಗವಹಿಸಿದ್ದರು.
ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರಬೇಕು ಎನ್ನುವ ದೃಷ್ಟಿಯಿಂದ ಶಾಸಕ ಕೆ.ಎಸ್.ಆನಂದ್ ಇಂತಹ ಕಾರ್ಯಾಗಾರವನ್ನು ಏರ್ಪಡಿಸಿರುವುದು ಶ್ಲಾಘನೀಯವಾದದ್ದು, ವಿದ್ಯಾರ್ಥಿಗಳು ಅವರ ಮುಂದಾಲೋಚನೆಗೆ ಚಿರಋಣಿಯಾಗಿರಿ.ಜಿ.ಬಿ.ವಿನಯಕುಮಾರ್ ಸಂಸ್ಥಾಪಕ, ಇನ್ಸೈಟ್ ತರಬೇತಿ ಸಂಸ್ಥೆ