ಯುವ ಸಮೂಹ ಜಾನಪದ ಕಲೆಯನ್ನು ಮೈಗೂಡಿಸಿಕೊಳ್ಳಿ: ಡಾ.ಮಹದೇವಸ್ವಾಮಿ

| Published : May 13 2025, 01:17 AM IST

ಯುವ ಸಮೂಹ ಜಾನಪದ ಕಲೆಯನ್ನು ಮೈಗೂಡಿಸಿಕೊಳ್ಳಿ: ಡಾ.ಮಹದೇವಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಕಲೆ ಮನರಂಜನೆಯನ್ನು ಕೊಡುವುದರ ಜೊತೆಗೆ ಜೀವನದ ಮೌಲ್ಯವನ್ನು ತಿಳಿಸುವ ದಾರಿದೀಪವಾಗಿದೆ. ದೇವರ ಕಾಯಕವನ್ನು ಮಾಡಲು ಕಲಿತ ಜಾನಪದ ಕಲೆ ಕಲಾವಿದರ ಹೊಟ್ಟೆಯನ್ನು ತುಂಬಿಸುವುದರ ಜೊತೆಗೆ ದೇವರ ಕಥೆಗಳನ್ನು ಬಾಯಿಂದ ಬಾಯಿಗೆ ಕಲಿಸುವ ಸಾಧನವಾಗಿದೆ.

ಜನಪದ ಗೀತೆ, ರಂಗಗೀತೆಗಳ ಗಾಯನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮಳವಳ್ಳಿ ಜೀವನೋಪಾಯಕ್ಕಾಗಿ ಕಲಿತ ಜಾನಪದ ಕಲೆ ಬದುಕನ್ನು ಹಸನು ಮಾಡುವ ಶಕ್ತಿಯನ್ನು ಹೊಂದಿದ್ದು, ಯುವ ಸಮೂಹ ಜಾನಪದ ಕಲೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ. ಮಹದೇವಸ್ವಾಮಿ ತಿಳಿಸಿದರು.

ಪಟ್ಟಣದ ರಂಗನಾಥ ಕಾಂಪ್ಲೆಕ್ಸ್‌ನಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್, ಮಳವಳ್ಳಿ ಸುಂದ್ರಮ್ಮ ಸಾಂಸ್ಕೃತಿಕ ವೇದಿಕೆ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಜನಪದ ಚೇತನ ದಿ. ಮಹದೇವಮ್ಮ ಸ್ಮರಣಾರ್ಥ ನಡೆದ ಜನಪದ ಗೀತೆ ಮತ್ತು ರಂಗಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾನಪದ ಕಲೆ ಮನರಂಜನೆಯನ್ನು ಕೊಡುವುದರ ಜೊತೆಗೆ ಜೀವನದ ಮೌಲ್ಯವನ್ನು ತಿಳಿಸುವ ದಾರಿದೀಪವಾಗಿದೆ. ದೇವರ ಕಾಯಕವನ್ನು ಮಾಡಲು ಕಲಿತ ಜಾನಪದ ಕಲೆ ಕಲಾವಿದರ ಹೊಟ್ಟೆಯನ್ನು ತುಂಬಿಸುವುದರ ಜೊತೆಗೆ ದೇವರ ಕಥೆಗಳನ್ನು ಬಾಯಿಂದ ಬಾಯಿಗೆ ಕಲಿಸುವ ಸಾಧನವಾಗಿದೆ ಎಂದು ಹೇಳಿದರು.

ತಂಬೂರಿ ಗುರುಬಸವಯ್ಯ ಜಾನಪದ ಕಲೆಯ ಸಾಧಕರಲ್ಲಿ ಒಬ್ಬರಾಗಿದ್ದಾರೆ, ಇತ್ತೀಚಿನ ದಿನಗಳಲ್ಲಿ ಸಾವಿರಾರು ಜಾನಪದ ಕಲಾವಿದರನ್ನು ಕಾಣಬಹುದಾಗಿದ್ದು, ಇನ್ನಷ್ಟು ಜಾನಪದ ಕಲೆಗಳನ್ನು ಯುವ ಕಲಾವಿದರು ಕಲಿಯಬೇಕೆಂದು ಕರೆ ನೀಡಿದರು.

ಹಿರಿಯ ಜಾನಪದ ಕಲಾವಿದ ತಂಬೂರಿ ಗುರುಬಸವಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನರಂಜನೆಯ ಭಾಗವಾಗಿ ಜಾನಪದ ಕಲೆಯನ್ನು ಇಷ್ಟಬಂದ ರೀತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಮೂಲ ಜಾನಪದ ಕಲೆ ಹಾಗೂ ಕಲಾವಿದರನ್ನು ಉಳಿಸಿ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ ಪ್ರಕಾಶ್, ಮುಖಂಡರಾದ ಸಾಲುಮರದ ನಾಗರಾಜು, ಡಾ. ಹುಸ್ಕೂರು ಕೃಷ್ಣೇಗೌಡ, ಪಿ.ನಾಗರತ್ನಮ್ಮ, ಮಹದೇವ, ನಾಗೇಶ್, ಕೈಲಾಸಮೂರ್ತಿ, ರಾಮಲಿಂಗಯ್ಯ ಸೇರಿದಂತೆ ಇತರರು ಇದ್ದರು.