ಸಾರಾಂಶ
ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಜೈಭೀಮ್ ಎಂಬ ಭಾವನಾತ್ಮಕ ಘೋಷಣೆ ಜೊತೆಗೆ ಶಿಕ್ಷಣದ ಮಹತ್ವವನ್ನು ಎತ್ತಿ ಹಿಡಿದು ಆಡಳಿತ ಯಂತ್ರದ ಸೂತ್ರದಾರನ ಜಾಗಕ್ಕೆ ಯುವಸಮೂಹ ಹೆಚ್ಚು ಮಂದಿ ಹೋಗುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯ ಈಡೇರಿಸಬೇಕೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಬೌದ್ಧ ಅಂಬೇಡ್ಕರ್ ಮಹಾದ್ವಾರ, ಭಗವಾನ್ ಗೌತಮ ಬುದ್ಧ, ರಾಜರ್ಷಿ ಕೃಷ್ಣರಾಜ ಒಡೆಯರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯಿಂದ ಶಿಕ್ಷಣ ಕ್ರಾಂತಿಯಿಂದ ಅತಿ ಹೆಚ್ಚು ಮಂದಿ ಶಿಕ್ಷಣವಂತರಾಗಿ ಹಲವು ದೊಡ್ಡ ಹುದ್ದೆ ಆಲಂಕರಿಸಿದರು. ಆದರೆ, ಇತ್ತೀಚಿನ ದಿನಗಳಲ್ಲಿ ಐಎಎಸ್, ಐಪಿಎಸ್ ಹುದ್ದೆಗಳನ್ನು ಪಡೆದುಕೊಳ್ಳುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಹಾಗೂ ಶಿಕ್ಷಣದಲ್ಲಿ ಸಾಧನೆ ಇಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಉಪಯೋಗದ ಜೊತೆಗೆ ದುರುಪಯೋಗವು ಹೆಚ್ಚಾಗಿದೆ. ಬಾಬಾ ಸಾಹೇಬರಿಗೆ ನಮನ ಸಲ್ಲಿಸುವ ಪ್ರತಿಯೊಬ್ಬರು ಸಾಧನೆಯಲ್ಲಿ ಎಡವಿದ್ದಾರೆ. ಜ್ಞಾನದಿಂದ ಮಾತ್ರ ಎಲ್ಲವನ್ನು ಬದಲಾಯಿಸಲು ಸಾಧ್ಯ ಎನ್ನುವುದನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತೋರಿಸಿಕೊಟ್ಟಿದ್ದು, ಪ್ರತಿಯೊಬ್ಬರು ಅನುಸರಿಸಬೇಕೆಂದು ಸಲಹೆ ನೀಡಿದರು.
ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ವೈಭವೀಕರಿಸುವುದಕಷ್ಟೆ ಸೀಮಿತಗೊಳಿಸದೇ ಅವರ ಅನುಕರಣಿಯಾಗಬೇಕು, ಗ್ರಾಮದಲ್ಲಿ ಬುದ್ಧರ ಪಂಚ ಶೀಲ ತತ್ವವನ್ನು ಅಳವಡಿಸಿಕೊಂಡು ದುಷ್ಚಟಗಳಿಗೆ ಬಲಿಯಾಗದೇ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್ ಮಾತನಾಡಿ, ಎಲ್ಲಾದಕ್ಕಿಂತ ಜ್ಞಾನವೇ ಶ್ರೇಷ್ಠವಾಗಿದೆ. ಬುದ್ದ, ಬಸವ ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವು ಮಹನೀಯರ ಜ್ಞಾನದ ಸಾಧನೆಯಿಂದಲೇ ಇಂದು ಮಾನಸಿಕವಾಗಿ ಉಳಿದಿದ್ದಾರೆ ಎಂದರು.
ಗ್ರಾಮದ ಮಕ್ಕಳಿಗೆ ಶಿಕ್ಷಣದ ತರಬೇತಿ ಜೊತೆಗೆ ಬುದ್ದರ ಪಂಚಶೀಲತತ್ವವನ್ನು ಬೋಧನೆ ಮಾಡುವುದರ ಮೂಲಕ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.ಇದೇ ವೇಳೆ ಕೊಳ್ಳೇಗಾಲದ ಜೇತವನ ಬುದ್ಧವಿಹಾರ ಮನೋರಕ್ಕಿತ ಬಂತೇಜಿ ಬುದ್ಧ ವಂದನೆ ಸಲ್ಲಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಪಾಲಕ ಅಭಿಯಂತರ ಕೆ.ಎಂ.ರವಿಕುಮಾರ್, ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮುಖಂಡರಾದ ನಂಜಪ್ಪ, ದೊಡ್ಡಮಾರಯ್ಯ, ಕೆ.ಜೆ ದೇವರಾಜು, ಪುರಸಭೆ ಸದಸ್ಯ ಸಿದ್ದರಾಜು, ಮುಖಂಡರಾದ ಕೆ.ಎಂ.ನಂಜುಂಡಸ್ವಾಮಿ, ಎಂ.ಎನ್.ಜಯರಾಜು, ನಂಜುಂಡಸ್ವಾಮಿ, ಮಹದೇವಸ್ವಾಮಿ, ಸುರೇಶ, ಮಲ್ಲು, ಶ್ರೀನಿವಾಸ್, ಪ್ರಕಾಶ್, ಮಲ್ಲೇಶ ಸೇರಿದಂತೆ ಇತರರು ಇದ್ದರು.