ಕಲಿಕೆಯಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುವುದು ಅಗತ್ಯ ಎಂದರು.ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಮುಖ್ಯ. ವಿದ್ಯಾಭ್ಯಾಸದೊಂದಿಗೆ ಕಲೆ, ಕ್ರೀಡೆಗಳಲ್ಲೂ ಭಾಗವಹಿಸಬೇಕು.

ಹೊಸಪೇಟೆ: ಸಮಾಜದಲ್ಲಿ ಯುವ ಸಮುದಾಯಕ್ಕೆ ಹಿರಿಯರು ಸ್ಫೂರ್ತಿಯಾಗಿರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಅಧ್ಯಯನ ಮುಖ್ಯವಾಗಿದ್ದು, ಯುವಕರು ಉನ್ನತ ಹುದ್ದೆ ಅಲಂಕರಿಸಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಬೆಂಗಳೂರಿನ ಪೊಲೀಸ್ ತರಬೇತಿ ವಿಭಾಗ ಎಡಿಜಿಪಿ ಬಿ.ದಯಾನಂದ್ ಹೇಳಿದರು.

ನಗರದ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದ ಮೊದಲ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ವಿತರಣಾ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಹೊರತರಲು ಹಾಗೂ ಅವರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿ ಸ್ಫೂರ್ತಿ ನೀಡಲು ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದ ಕೈಗೊಳ್ಳುತ್ತಿರುವ ಕಾರ್ಯಕ್ರಮ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮ ನಿರಂತರವಾಗಿದ್ದರೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೈ ಜೋಡಿಸುವಂತಾಗಿರುತ್ತದೆ. ಕಲಿಕೆಯಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುವುದು ಅಗತ್ಯ ಎಂದರು.ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಮುಖ್ಯ. ವಿದ್ಯಾಭ್ಯಾಸದೊಂದಿಗೆ ಕಲೆ, ಕ್ರೀಡೆಗಳಲ್ಲೂ ಭಾಗವಹಿಸಬೇಕು. ಎಲ್ಲ ರಂಗಗಳಲ್ಲೂ ಬೆಳೆಯಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶ್ರಮ ಪಡಬೇಕು. ಈ ಪದವೀಧರ ವಿದ್ಯಾವರ್ಧಕ ಸಂಘ ಗುರುತಿಸಿರುವ ಎಸ್ಸೆಸ್ಸೆಲ್ಸಿ ಬಡ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರು. ವೈಯಕ್ತಿಕವಾಗಿ ನೀಡುವೆ ಎಂದರು.

ಚನ್ನಗಿರಿ ಶಾಂತಿಸಾಗರ ವಲಯ ಅರಣ್ಯ ಅಧಿಕಾರಿ ಉಷಾ ಮಾತನಾಡಿ, ವಾಲ್ಮೀಕಿ ಸಮುದಾಯ ಮಹಾನ್‌ ಪರಂಪರೆ ಹೊಂದಿದೆ. ಧೈರ್ಯ, ಶೌರ್ಯ, ಧಾರ್ಮಿಕ, ಶಿಕ್ಷಣ, ಕೃಷಿ ಮಾತ್ರವಲ್ಲ ಅರಣ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸಮುದಾಯ ಮಕ್ಕಳು ವಿದ್ಯಾಭ್ಯಾಸದಿಂದಲೇ ಗುರಿಯನ್ನು‌ ಮುಟ್ಟಬೇಕಿದೆ. ಯಶಸ್ಸು ಸಾಧಿಸಲು ತಾಳ್ಮೆ ಮುಖ್ಯ. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿದಾಗ ಮಾತ್ರದ ಸಾಧನೆಯ ಗುರಿ ತಲುಪಲು ಸಾಧ್ಯ ಎಂದರು.

ಸಂಘದ ಅಧ್ಯಕ್ಷ ಡಾ.ಗುಂಡಿ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‌ಪಿ ಡಾ.ತಳವಾರ ಮಂಜುನಾಥ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ರವಿಕುಮಾರ್, ನಗರಸಭೆ ಪೌರಾಯುಕ್ತ ಶಿವಕುಮಾರ್ ಯರಗುಡಿ, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ಗೋಸಲ ಭರಮಪ್ಪ, ಕಲಾವಿದೆ ಡಾ.ಕೆ.ನಾಗರತ್ನಮ್ಮ, ಚಿತ್ರಕಲಾವಿದ ಬಾಣದ ಮಾರುತಿ ಮತ್ತಿತರರಿದ್ದರು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ. ಲಕ್ಷ್ಮಣ, ವಕೀಲರ ಸಂಘದ ನೂತನ ಅಧ್ಯಕ್ಷ ಗುಜ್ಜಲ ನಾಗರಾಜ, ಎಂಜನಿಯರ್‌ ಸತೀಶ್‌ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.