ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಭಾರತ ಸಾಕಷ್ಟು ಯುವ ಸಂಪತ್ತನ್ನು ಹೊಂದಿದೆ. ಯುವಪೀಳಿಗೆ ಉತ್ತಮ ಆರೋಗ್ಯ, ಸಂಸ್ಕೃತಿ, ಮೌಲ್ಯಗಳನ್ನು ಮೈಗೂಡಿಸಿಕೊಂಡು ಶ್ರಮಿಸಿದರೆ ಸಮಾಜದ ಅಭಿವೃದ್ಧಿ ಮತ್ತು ಪರಿವರ್ತನೆ ಸಾಧ್ಯ ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಬಿ.ಸುರೇಶ್ ಬಾಬು ಹೇಳಿದರು.ಅವರು ತಾಲೂಕಿನ ಬುಕ್ಕಾಪಟ್ಟಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ ಮತ್ತು ಎನ್.ಎಸ್.ಎಸ್.ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು, ತಂದೆ- ತಾಯಿಗೆ ಗೌರವ ನೀಡಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಯುವಕರುಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟು ದೇಶದ ಪ್ರಗತಿಗೆ ಮುಂದಡಿ ಇಡಬೇಕಾದ ಕರ್ತವ್ಯ ನಮ್ಮ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಕಾಲೇಜುಗಳು ಎಂದರೆ ವಿದ್ಯಾವಂತ ನಿರುದ್ಯೋಗಿಗಳನ್ನು ತಯಾರಿಸುವ ಕಾರ್ಖಾನೆಗಳಾಗಿ ಬದಲಾಗುತ್ತಿವೆ. ಯುವಕರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ ಕೊಡುವ ಮೂಲಕ ಹೊಸ ಪ್ರಯತ್ನಗಳಿಗೆ ಹೊಸ ಸಂಶೋಧನೆ, ಆಲೋಚನೆಗಳನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಎನ್ ಎಸ್ ಎಸ್ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.
ಪ್ರಾಂಶುಪಾಲ ಡಾ. ಎಸ್.ಆರ್.ಹನುಮಂತರಾಯ ಮಾತನಾಡಿ, ಎನ್.ಎಸ್.ಎಸ್. ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸ್ವಯಂಶಿಸ್ತು, ಸಮಯಪ್ರಜ್ಞೆ ಇನ್ನು ಮುಂತಾದ ಮೌಲ್ಯಗಳು ಬೆಳೆಯುತ್ತದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಗೃಹಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ನಾಗಣ್ಣ ಮಾತನಾಡಿ, ಶಿಕ್ಷಣದ ಪ್ರಾಮುಖ್ಯತೆ ನಮ್ಮ ಸಂವಿಧಾನದ ಮಹತ್ವದ ಬಗ್ಗೆ ತಿಳಿಸಿ ಶಿಬಿರಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ವಿಜಯ್, ಸಹಪ್ರಾಧ್ಯಾಪಕರಾದ ಧರಣೇಂದ್ರಕುಮಾರಿ, ಸತೀಶ್.ಎ.ಎಂ, ಮಹೇಶ.ಎನ್. ಲೋಕೇಶ್.ಎನ್, ಮಂಜುನಾಥ್, ಶ್ರೀನಿವಾಸ್.ಜಿ., ದೈ.ಶಿ.ನಿ ಶ್ರೀನಿವಾಸ್ ಶಾರ್ವರಿ, ಅಮೃತ, ಖಲೀದ ಖಾನಂ, ಸುಷ್ಮಾ, ಪುಟ್ಟಲಿಂಗಪ್ಪ ಮತ್ತು ಗ್ರಂಥ ಪಾಲಕ ಜಗದೀಶ್ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಶಾಂತಕುಮಾರ್, ದಿವಾಕರ್, ರೇವಣ್ಣ, ರಂಗನಾಥ್ ಸೇರಿದಂತೆ ಹಲವರು ಹಾಜರಿದ್ದರು.