ಸಾರಾಂಶ
೭೯ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ವಾಯುಸೇನೆಯ ನಿವೃತ್ತ ಅಧಿಕಾರಿ ಗುಂಡ್ಮಿ ಚಂದ್ರಶೇಖರ ನಾಯರಿ ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ದೇಶ ಸೇವೆಗೆ ಹಲವು ದಾರಿಗಳಿರಬಹುದು, ಆದರೆ ಸೇನೆಗೆ ಸೇರಿಕೊಳ್ಳುವ ಮೂಲಕ ಯುವ ಜನತೆ ಜೀವನೋಪಾಯದ ಜೊತೆಗೆ ದೇಶ ಸೇವೆಯಲ್ಲಿ ತೊಡಗಬಹುದು ಎಂದು ವಾಯುಸೇನೆಯ ನಿವೃತ್ತ ಅಧಿಕಾರಿ ಗುಂಡ್ಮಿ ಚಂದ್ರಶೇಖರ ನಾಯರಿ ಕರೆ ನೀಡಿದ್ದಾರೆ.೭೯ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಭಾರತ ಜನತೆ ನಿರಾಳವಾಗಿ ಜೀವನ ಸಾಗಿಸಲು ಸೇನೆ ಪಾತ್ರ ಗಣನೀಯವಾದದ್ದು ಎಂದು ದೇಶದ ಸೇನಾಬಲ, ಅದರ ಕಾರ್ಯವೈಖರಿಯನ್ನು ಬಿಚ್ಚಿಟ್ಟರು. ದೇಶದ ಯುವ ಸಮೂಹ ಸೈನ್ಯದಲ್ಲಿ ಕಾರ್ಯನಿರ್ವಹಿಸಲು ಪೋಷಕರ ಸಹಕಾರವನ್ನು ಒತ್ತಿ ಹೇಳಿದರು. ಪಂಚವರ್ಣ ಸಂಘಟನೆಯ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೆ. ಕೃಷ್ಣ ಕಾಂಚನ್ ಕಾರ್ಯಕ್ರಮ ಉದ್ಘಾಟಿಸಿದರು.ಸಂಘದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪರಿಸರವಾದಿ ಕೋ. ಗಿ. ನಾ, ಉದ್ಯಮಿ ರಮೇಶ್ ಪ್ರಭು, ಸಂಘದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಘದ ಪದಾಧಿಕಾರಿಗಳು ಇದ್ದರು.ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಸ್ವಾಗತಿಸಿದರು. ಸಂಚಾಲಕಿ ಸುಜಾತಾ ಬಾಯರಿ ನಿರೂಪಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.