ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರತಿಯೊಂದು ಹಬ್ಬಗಳ ಆಚರಣೆ ಹಿನ್ನೆಲೆಯ ಸರಿಯಾಗಿ ಅರಿತು ಹಬ್ಬಗಳ ಸಂಪ್ರದಾಯ ಬದ್ಧವಾಗಿ ಆಚರಿಸಿ, ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳ ಯುವ ಸಮೂಹ ಮರೆಯಬಾರದು ಈ ನಿಟ್ಟಿನಲ್ಲಿ ಮನೆಯ ಹಿರಿಯರು ಗಮನಹರಿಸಬೇಕು ಎಂದು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಶ್ರೀ ಚನ್ನಪ್ಪಸ್ವಾಮಿ ಬೆಳ್ಳಿ ರಥೋತ್ಸವ, ಸಂಸ್ಕೃತಿ-ಸಂಸ್ಕಾರ ಹಾಗೂ ಶಿವರಾತ್ರಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ ಇತ್ತೀಚೆಗೆ ಶಿವರಾತ್ರಿ ಜಾಗರಣೆ ಸಮಯದಲ್ಲಿ ಯುವ ಸಮೂಹ ಶಿವನ ಧ್ಯಾನ, ಭಜನೆ, ಪೂಜೆಗಳಲ್ಲಿ ಭಾಗಿಯಾಗದೇ ಮೋಜು-ಮಸ್ತಿ, ಇಸ್ಪೀಟ್, ಕುಡಿತ, ಸಿನಿಮಾ ನೋಡುವ ಮೂಲಕ ಆಚರಣೆಗೆ ಮುಂದಾಗುತ್ತಿರುವುದು ಬೇಸರ ತಂದಿದೆ ಎಂದರು.
ಲಿಂ.ಶ್ರೀಗಳ ಸಂಕಲ್ಪದಂತೆ ಶ್ರೀಮಠದಲ್ಲಿ ಚನ್ನಪ್ಪಸ್ವಾಮಿ ಜನಕಲ್ಯಾಣ ಟ್ರಸ್ಟ್ ಆರಂಭಿಸಿ ಆ ಮೂಲಕ 100 ಬೆಡ್ ಆಸ್ಪತ್ರೆ, ನರ್ಸಿಂಗ್, ಫಾರ್ಮಸಿ ಕಾಲೇಜ್, ಸಿಬಿಎಸ್‍ಇ ವಸತಿಯುತ ಶಾಲೆ, ಚನ್ನಪ್ಪಸ್ವಾಮಿಗಳ ಸುವರ್ಣ ಮೂರ್ತಿ, ಕೋಟಿ ದೀಪೋತ್ಸವ, ಕೋಟಿ ಬಿಲ್ವಾರ್ಚನೆಗಳ ಶ್ರೀಮಠದ ಭಕ್ತರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳ ಹಾಕಿಕೊಂಡಿದ್ದು, ಬರಗಾಲ ಪ್ರಯುಕ್ತ ಎಲ್ಲಾ ಯೋಜನೆಗಳ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.ಸನ್ಮಾನ ಸ್ವೀಕರಿಸಿದ ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರಗೌಡ ಮಾತನಾಡಿ ವಿದೇಶಿಗರು ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಮಾರುಹೋಗಿ ಅವುಗಳ ಅನುಕರಿಸುತ್ತಿದ್ದರೆ, ಭಾರತೀಯರು ವಿದೇಶಿಗರ ಸಂಸ್ಕೃತಿಯ ಅನುಕರಣೆ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದ್ದು ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಹಿರೇಕಲ್ಮಠವು ಮಧ್ಯ ಕರ್ನಾಟಕದಲ್ಲೇ ತ್ರಿವಿಧ ದಾಸೋಹಕ್ಕೆ ಪ್ರಖ್ಯಾತಿ ಪಡೆದ ಮಠ, ನಮ್ಮ ದೊಡ್ಡಪ್ಪ ದಿ.ಡಿ.ಜಿ.ಬಸವನ ಗೌಡರ ಕಾಲದಿಂದಲೂ ನಮ್ಮ ಕುಟುಂಬವು ಶ್ರೀಮಠದ ಭಕ್ತರಾಗಿದ್ದು, ಶ್ರೀಗಳ ಮತ್ತು ಮಠದ ಸೇವೆ ಮಾಡುತ್ತ ಬಂದಿದ್ದೇವೆ ಮತ್ತು ಸೇವೆಗಾಗಿ ನಾವು ಸದಾ ಸಿದ್ಧರಿದ್ದೇವೆ. ಈಗಿನ ಶ್ರೀಗಳು ಲಿಂ.ಒಡೆಯರ್ ಚಂದ್ರಶೇಖರ ಸ್ವಾಮೀಜಿ ಕೆಲಸಗಳ ಅಚ್ಚುಕಟ್ಟಾಗಿ ಮಾಡಿ ಭಕ್ತರ ಮನಸ್ಸು ಗೆದ್ದಿದ್ದು, ಭಕ್ತರ ಒಳಿತಿಗಾಗಿ ಸದಾ ಒಂದಿಲ್ಲೊಂದು ಹೊಸ ಯೋಜನೆಗಳಿಗೆ ಮುಂದಾಗುತ್ತಿರುತ್ತಾರೆ ಎಂದರು. ಹಿರೇಕಲ್ಮಠದಲ್ಲಿ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸುವ ಪ್ರಯತ್ನ ಮಾಡುತ್ತಿದ್ದು ಅನುಕರಣೀಯ ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳ ಕರೆತರಬೇಕು ಎಂದು ವಿನಂತಿಸಿದರು.ಈ ವೇಳೆ ಸಮಾಜ ಸೇವಕ ಚನ್ನೇಶ್ ಜಕ್ಕಾಳಿರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಚನ್ನಪ್ಪ ಸ್ವಾಮಿ ಗಾನ ಕಲಾ ಬಳಗ ಮತ್ತು ಸಂಸ್ಕತಿ-ಸಂಸ್ಕಾರ ತಂಡದ ವತಿಯಿಂದ ನಡೆದ ಸಾಂಸ್ಕತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು. ಮಠದ ವ್ಯವಸ್ಥಾಪಕ ಎಂ.ಪಿ.ಎಂ.ಚನ್ನಬಸಯ್ಯ, ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರಿ, ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕ ಚನ್ನೇಶಯ್ಯ, ಕಾಂಗ್ರೆಸ್ ಮುಖಂಡ ರೇವಣಸಿದ್ದಪ್ಪ, ಪೂಜಾಮರಿ ಹಾಲಸ್ವಾಮಿ ಮತ್ತಿತರರಿದ್ದರು.