ಸಾರಾಂಶ
ಹಾನಗಲ್ಲ: ಯುವಕರು ಒಂದು ಒಕ್ಕೂಟವಾಗಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಸಾಮರ್ಥ್ಯ ವೃದ್ಧಿ, ಸಾಮಾಜಿಕ ನ್ಯಾಯಕ್ಕೆ ಬಲ ಬರಲು ಸಾಧ್ಯ ಎಂಬುದನ್ನರಿತು ಕಾಲ ಹರಣವಿಲ್ಲದೆ ಕ್ರಿಯಾಶೀಲರಾಗಿ ಎಂದು ಬೆಂಗಳೂರಿನ ಇಂಡಿಯನ್ ಅಸೋಸಿಯೇಶಿಯಲ್ ಇನ್ಸಿಟಿಟ್ಯೂಟ್‌ನ ಬಾಲರಾಜ ಕರೆ ನೀಡಿದರು.
ಶುಕ್ರವಾರ ಇಲ್ಲಿನ ಗುರುಭವನದಲ್ಲಿ ಬೆಂಗಳೂರಿನ ಇಂಡಿಯನ್ ಅಸೋಸಿಯೇಶಿಯಲ್ ಇನ್ಸಿಟಿಟ್ಯೂಟ್, ಹಾನಗಲ್ಲಿನ ಯಂಗ ವಿಜನ್, ರೋಶನಿ ಸಮಾಜ ಸೇವಾ ಸಂಸ್ಥೆ, ಲೋಯಲಾ ವಿಕಾಸ ಕೇಂದ್ರ, ಬೆಳಗಾಲಪೇಟೆಯ ಅಕ್ಕಮಹಾದೇವಿ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ಯುವ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಪ್ರತಿಯೊಬ್ಬರಿಂದಲೂ ಆಗಬೇಕು. ಸಮಾನತೆಯ ಸಮಾಜ ಕಟ್ಟಲು ಮುಂದಾಗಿ. ಸಂವಿಧಾನದ ಹಕ್ಕು ತಿಳಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳಿ. ಯುವ ಶಕ್ತಿ ಸಮಾಜದ ಶಕ್ತಿಯಾಗಲಿ ಎಂದರು.ರೋಶನಿ ಸಮಾಜಸೇವಾ ಸಂಸ್ಥೆಯ ಸಹ ನಿರ್ದೇಶಕಿ ಶಾಂತಿ ಮಾತನಾಡಿ, ಈಗ ಯುವ ಶಕ್ತಿ ಜಾಗೃತವಾಗಬೇಕಾದ ಕಾಲದಲ್ಲಿದ್ದೇವೆ. ಸಂವಿಧಾನ ನಮಗೆ ನೀಡಿದ ಸೌಲಭ್ಯಗಳನ್ನು ಯಥಾವತ್ತಾಗಿ ಬಳಸಿಕೊಂಡು ಪ್ರತಿ ವ್ಯಕ್ತಿ ಸಮಾಜದ ಮುಖ್ಯ ವಾಹಿನಿಯಲ್ಲಿರಬೇಕು. ಇಲ್ಲಿ ಎಲ್ಲರೂ ಸಮಾನರು. ಮೇಲು ಕೀಳಿಗೆ ಇಲ್ಲಿ ಅವಕಾಶವಿರಬಾರದು. ಇದು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಸಾಮೂಹಿಕ ಪ್ರಯತ್ನದಿಂದ ಸಾಮಾಜಿಕ ನ್ಯಾಯ ಸಾಧ್ಯ ಎಂದರು.
ಲೋಯಲಾ ವಿಕಾಸ ಕೇಂದ್ರದ ಸಹ ನಿರ್ದೇಶಕ ಜಾನ್‌ಸನ್ ಮಾತನಾಡಿ, ನಾನು, ನನ್ನ ಸಮಾಜ ಎಂಬ ಅಭಿಮಾನವಿದ್ದರೆ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರೂ ಸಮಾನರು. ನಾಗರಿಕ ಸಮಾಜದಲ್ಲಿರುವ ನಮಗೆ ಭೇದಕ್ಕೆ ಅವಕಾಶವಿಲ್ಲ. ದುರ್ಬಲ ಸಮುದಾಯಗಳನ್ನು ಅಭಿವೃದ್ಧಿಗೊಳಿಸುವ ಮನಸ್ಸು ಮೊದಲು ಬೇಕು. ಪಂಚಾಯತ್‌ರಾಜ್ ವ್ಯವಸ್ಥೆಯ ಅರಿವು ನಮಗಿರಲಿ. ಮಾತೃ ಸ್ಥಾನದ ಅರಿವು ನಮಗಿರಬೇಕು. ಪರಿಸರವನ್ನು ಪ್ರೀತಿಸಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಎಂ. ಮಂಜುನಾಥ, ರೋಶನಿ ಸಂಸ್ಥೆಯ ಜಾನೆಟ್, ಹಾನಗಲ್ಲ ಯಂಗ್ ವಿಜನ್ ಸಂಸ್ಥೆ ಮುಖ್ಯಸ್ಥ ಫೈರೋಜ ಅಹಮ್ಮದ್ ಶಿರಬಡಗಿ, ವಿನ್ಸೆಂಟ್ ಜೇಸನ್, ಶಿವಾನಂದ ಅಲ್ಲಾಪುರ, ಕೆ.ಎಫ್. ನಾಯ್ಕರ, ಡಿಗ್ಗಪ್ಪ ಲಮಾಣಿ, ಮಂಜುನಾಥ ಗೌಳಿ, ಶಿವಕುಮಾರ ಮಾಂಗ್ಲೇನವರ, ಪ್ರವೀಣ ಮಾಂಗ್ಲೇನವರ, ಫಕ್ಕೀರೇಶ ಗೌಡಳ್ಳಿ, ಪೀರಪ್ಪ ಸಿಸಿ ಇದ್ದರು.