ಸಾರಾಂಶ
ಡಂಬಳ: ಕುಸ್ತಿಗೆ ಹಿಂದೇಟು ಹಾಕುವ ಕಾಲದಲ್ಲಿ ಗ್ರಾಮಸ್ಥರು ಜಾತ್ರಾಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡುವ ಮೂಲಕ ಯುವಕರು ಉತ್ತಮ ಆರೋಗ್ಯವಂತರಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ ಎನ್ನುವ ಸದುದ್ದೇಶ ಹೊಂದಿರುವುದು ಪ್ರಶಂಸನೀಯ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.
ತೋಂಟದಾರ್ಯ ಮದರ್ಧನಾರೀಶ್ವರ ಜಾತ್ರಾಮಹೋತ್ಸವ ಮತ್ತು ಜಮಾಲಶಾವಲಿ ಶರಣರ ಉರೂಸ್ ಅಂಗವಾಗಿ ಡಂಬಳ ಗ್ರಾಮದ ಗರಡಿಮನಿ ಉದ್ಘಾಟನೆ ಮತ್ತು ತೋಂಟದಾರ್ಯ ಕಲಾಭವನದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಭಾರೀ ಜಂಗಿ ನಿಕಾಲಿ ಕುಸ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಯುವಕರು ಇತ್ತೀಚೆಗೆ ದುರ್ವ್ಯಸನಕ್ಕೆ ಒಳಗಾಗುವುದರ ಮೂಲಕ ಆರೋಗ್ಯ ಹಾಳಾಗುತ್ತಿದೆ, ಕುಟುಂಬಗಳು ಬೀದಿ ಪಾಲಾಗುತ್ತಿವೆ. ಪಾಲಕರು ಯುವಕರತ್ತ ಹೆಚ್ಚು ಗಮನ ಹರಿಸಬೇಕು. ಡಂಬಳ ಗ್ರಾಮದಲ್ಲಿ ಸುಸಜ್ಜಿತ ಗರಡಿ ಮನೆ ಪ್ರಾರಂಭವಾಗಿದ್ದು, ಕುಸ್ತಿ ಕಲಿಯಲು ಬೇಕಾದ ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.
ಬೆಳಗಟ್ಟಿಯ ಹಜರತ್ ಮಹೇಬೂಬ್ ಶಾ ಖಾದ್ರಿ ಸಜ್ಜಾದೇ ನಶೀರ ಮಾತನಾಡಿ, ಇಂದಿನ ಯುವಕರು ಅತಿಯಾದ ಮೊಬೈಲ್ ಗೇಮ್‌ಗಳಿಗೆ ದಾಸರಾಗಿ ಕ್ರೀಡಾ ಚಟುವಟಿಕೆಯಿಂದ ದೂರವಾಗಿದ್ದಾರೆ. ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಸ್ತಿ ಸೇರಿದಂತೆ ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ದೇಶ, ಗ್ರಾಮ ಹಾಗೂ ಕುಟುಂಬದ ಕೀರ್ತಿ ತರಬೇಕು ಎಂದು ಕರೆನೀಡಿದರು.ಯುವ ನೇತಾರ ಮಿಥುನ ಜಿ. ಪಾಟೀಲ್, ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ, ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ. ಕುಸ್ತಿ ದೇಶದ ಕ್ರೀಡೆಯಾಗಿದ್ದು, ಇದು ದೇಶದ ಸಂಸ್ಕೃತಿ ಬಿಂಬಿಸುತ್ತದೆ. ಗ್ರಾಮೀಣ ಭಾಗದ ಜನಪ್ರಿಯ ಕ್ರೀಡೆಯಾದ ಕುಸ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಬದ್ಧ ಎಂದು ಹೇಳಿದರು.
ತೀವ್ರ ಕುತುಹಲ ಕೆರಳಿಸಿದ ₹8 ಸಾವಿರ ವಿಭಾಗದ ಕುಸ್ತಿಯಲ್ಲಿ ಗಜಾನಂದ ಬೆಳಗಾವಿ ಅವರನ್ನು ದಯಾನಂದ ಡಂಬಳ ಸೋಲಿಸಿ ಗೆಲವು ಸಾಧಿಸಿದರು. ₹500 ವಿಭಾಗದಲ್ಲಿ ಡಂಬಳ ಗ್ರಾಮದ ಸುಬ್ರಹ್ಮಣ್ಯ ಮಂಜುನಾಥ ಸಂಜೀವಣ್ಣನವರ ದಾನೇಶ ಅಮರಗೊಳ ವಿರುದ್ಧ ಗೆಲವು ಸಾಧಿಸಿ ಗಮನ ಸೆಳೆದರು.₹ 500ರಿಂದ ಪ್ರಾರಂಭವಾದ ಕುಸ್ತಿ ಪಂದ್ಯಾವಳಿ ₹ 8 ಸಾವಿರದ ಸ್ಪರ್ಧೆಯೊಂದಿಗೆ ಕೊನೆಗೊಂಡಿತ್ತು. ರಾಜ್ಯ, ಅಂತಾರಾಜ್ಯ ಹಾಗೂ ಸ್ಥಳೀಯರು ಸೇರಿದಂತೆ 25ಕ್ಕೂ ಅಧಿಕ ಜೋಡಿಯ ಕುಸ್ತಿಪಟುಗಳು ಆಗಮಿಸಿ ಸೆಣಸಾಡಿದರು.
ಜಂಗಿ ನಿಕಾಲಿ ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳು ತೊಡೆ ತಟ್ಟಿ, ಸೆಡ್ಡು ಹೊಡೆದು ಸೆಣಸಾಡಿದರೆ ಪ್ರೇಕ್ಷಕರು ಗ್ಯಾಲರಿಯಿಂದ ಸಿಳ್ಳೆ, ಕೂಗಾಟ, ಚಪ್ಪಾಳೆ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿತ್ತು. ಕ್ರೀಡಾಪಟುಗಳು ತಮ್ಮ ಎದುರಾಳಿಯನ್ನು ಮಣ್ಣು ಮುಕ್ಕಿಸುವ ದೃಶ್ಯ ಕಂಡು ಪ್ರೇಕ್ಷಕರು ಕೇಕೆ ಹಾಕಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಮಡಿಹಾಳ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಕಾಶಭೋವಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎಸ್. ಯರಾಶಿ, ಗೌಸಿದ್ದಪ್ಪ ಬಿಸನಳ್ಳಿ, ಸಿದ್ದು ಹಿರೇಮಠ, ಮಲ್ಲಪ್ಪ ಮಠದ, ಮರಿತೆಮಪ್ಪ ಆದಮ್ಮನವರ, ಭೀಮಪ್ಪ ಗದಗ, ಮಂಜುನಾಥ ಸಂಜೀವಣ್ಣನವರ, ಉಪತಹಸೀಲ್ದಾರ ಸಿ.ಕೆ. ಬಳವುಟಗಿ, ದೇವಪ್ಪ ಗಡೇದ, ಅಮರಪ್ಪ ಗುಡಗುಂಟಿ, ಡಾ. ಅಶೋಕ ಬಂಗಾರಶೆಟ್ಟರ್ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಕ್ರೀಡಾ ಅಭಿಮಾನಿಗಳು ಇದ್ದರು. ಆರ್. ಜಿ. ಕೊರ್ಲಹಳ್ಳಿ ನಿರೂಪಿಸಿ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))