ದೇಶದ ಅಭಿವೃದ್ಧಿಯಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ MY Bharat ವಿವಿಧ ಅವಕಾಶಗಳನ್ನು ಕಲ್ಪಿಸುತ್ತಿದೆ. ಜಿಲ್ಲೆಯ 15 ರಿಂದ 29 ವರ್ಷದೊಳಗಿನ ಯುವಕರು ವಿಕಸಿತ ಭಾರತ ಕ್ವಿಜ್‌ನಲ್ಲಿ ಭಾಗವಹಿಸಿ ತಮ್ಮ ಜ್ಞಾನ ಹಾಗೂ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಯುವ ಅಧಿಕಾರಿ ಐಶ್ವರ್ಯ ಶ್ರೀನಿವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇಶದ ಅಭಿವೃದ್ಧಿಯಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ MY Bharat ವಿವಿಧ ಅವಕಾಶಗಳನ್ನು ಕಲ್ಪಿಸುತ್ತಿದೆ. ಜಿಲ್ಲೆಯ 15 ರಿಂದ 29 ವರ್ಷದೊಳಗಿನ ಯುವಕರು ವಿಕಸಿತ ಭಾರತ ಕ್ವಿಜ್‌ನಲ್ಲಿ ಭಾಗವಹಿಸಿ ತಮ್ಮ ಜ್ಞಾನ ಹಾಗೂ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಯುವ ಅಧಿಕಾರಿ ಐಶ್ವರ್ಯ ಶ್ರೀನಿವಾಸ್ ಹೇಳಿದರು.ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.30ರ ವರೆಗೆ ಆನ್‌ಲೈನ್‌ನಲ್ಲಿ ಕ್ವಿಜ್ ನಡೆಯಲಿದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಭಾಗವಹಿಸಲು ಅವಕಾಶವಿದ್ದು, ಭಾರತ, ಭಾರತೀಯ ಪರಂಪರೆ, ದೇಶದ ಸಾಧನೆಗಳು, ಅಭಿವೃದ್ಧಿಯ ಪಯಣ ಹಾಗೂ Viksit Bharat @2047ರ ದೃಷ್ಟಿಕೋನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರಲಿವೆ. ಒಟ್ಟು 20 ಪ್ರಶ್ನೆಗಳಿಗೆ 10 ನಿಮಿಷಗಳ ಅವಧಿಯಲ್ಲಿ ಉತ್ತರಿಸಬೇಕು ಎಂದರು.ಕ್ವಿಜ್‌ನಲ್ಲಿ ಉತ್ತಮ ಸಾಧನೆ ಮಾಡುವ ಅಗ್ರ ಶೇ.10ರಷ್ಟು, ಗರಿಷ್ಠ ನಾಲ್ಕು ಲಕ್ಷ ಸ್ಪರ್ಧಿಗಳು ಮುಂದಿನ ಹಂತವಾದ Viksit Bharat Essay Challengeಗೆ ಅರ್ಹರಾಗುವರು. ನಂತರ ಜಿಲ್ಲಾ ಚಾಂಪಿಯನ್‌ಶಿಪ್, ರಾಜ್ಯ/ಕೇಂದ್ರಾಡಳಿತ ಪ್ರದೇಶದ VBYLD ಹಾಗೂ ರಾಷ್ಟ್ರೀಯ VBYLD ಹಂತಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.Essay Challenge ಅ.5ರಿಂದ 19ರ ವರೆಗೆ, District Championship ನ.10ರಿಂದ 16ರ ವರೆಗೆ ಹಾಗೂ State/UT VBYLD ನ.17ರಿಂದ ಡಿ.7ರ ವರೆಗೆ ನಡೆಯಲಿದೆ. ಅಂತಿಮವಾಗಿ 2027ರ ಜ.10ರಿಂದ 12ರ ವರೆಗೆ ನವದೆಹಲಿಯಲ್ಲಿ National VBYLD ನಡೆಯಲಿದೆ. ಆಯ್ಕೆಯಾಗುವ ಯುವ ನಾಯಕರಿಗೆ ರಾಷ್ಟ್ರೀಯ ನಾಯಕರು, ನೀತಿ ನಿರೂಪಕರು ಹಾಗೂ ತಜ್ಞರೊಂದಿಗೆ ಸಂವಾದ ನಡೆಸುವ ಮತ್ತು ತಮ್ಮ ಆಲೋಚನೆಗಳನ್ನು ಮಂಡಿಸುವ ಅವಕಾಶ ದೊರೆಯಲಿದೆ ಎಂದು ಹೇಳಿದರು.ಶಿವಮೊಗ್ಗ ಜಿಲ್ಲೆಯ 15ರಿಂದ 29 ವರ್ಷದ ಯುವಕರು ಸೆ.30ರೊಳಗೆ MY Bharat ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಕ್ವಿಜ್‌ನಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆಯುತ್ತಿದ್ದ ರಾಷ್ಟ್ರೀಯ ಯುವಜನೋತ್ಸವವನ್ನು 2025ರಿಂದ Viksit Bharat Young Leaders Dialogue (VBYLD) ರೂಪದಲ್ಲಿ ಪುನರ್‌ರಚಿಸಲಾಗಿದೆ. Viksit Bharat @2047ರ ದೃಷ್ಟಿಕೋನಕ್ಕೆ ಅನುಗುಣವಾಗಿ ಯುವಕರ ಆಲೋಚನೆಗಳು, ನವೀನ ಪರಿಹಾರಗಳು ಹಾಗೂ ಭಾರತದ ಭವಿಷ್ಯದ ಕುರಿತ ದೃಷ್ಟಿಕೋನವನ್ನು ರಾಷ್ಟ್ರೀಯ ವೇದಿಕೆಯಲ್ಲಿ ಹಂಚಿಕೊಳ್ಳಲು ಇದರ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದರು.ಕಳೆದ ವರ್ಷ ದೇಶಾದ್ಯಂತ 50 ಲಕ್ಷಕ್ಕೂ ಹೆಚ್ಚು ಯುವಕರು ವಿಕಸಿತ ಭಾರತ ಚಾಲೆಂಜ್‌ನ ಕ್ವಿಜ್‌ನಲ್ಲಿ ಭಾಗವಹಿಸಿದ್ದರು. ಇದೀಗ VBYLD 2027ರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತವಾಗಿ ವಿಕಸಿತ ಭಾರತ ಕ್ವಿಜ್ ಆಯೋಜಿಸಲಾಗಿದೆ ಎಂದರು.