ಸಾರಾಂಶ
ಸಮಾಜದಲ್ಲಿ ದ್ವೇಷ, ಅಸೂಯೆ ಬಿಟ್ಟು ಪರಸ್ಪರ ಸ್ನೇಹ ಸೌಹಾರ್ದತೆ ಬೆಳೆಸಿಕೊಂಡರೆ ಸಮಸ್ಯೆಗಳಿಂದ ಪಾರಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು
ಕನ್ನಡಪ್ರಭ ವಾರ್ತೆ ದೇವನಹಳ್ಳಿ
ಸಮಾಜದಲ್ಲಿ ದ್ವೇಷ, ಅಸೂಯೆ ಬಿಟ್ಟು ಪರಸ್ಪರ ಸ್ನೇಹ ಸೌಹಾರ್ದತೆ ಬೆಳೆಸಿಕೊಂಡರೆ ಸಮಸ್ಯೆಗಳಿಂದ ಪಾರಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು. ಇಲ್ಲಿನ ಡಾ. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನರಾಂ118ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಕಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.ಆಗಿನ ಬರೋಡ ಮಹಾರಾಜರು ಅಂಬೇಡ್ಕರ್ ಅವರನ್ನು ವಿದೇಶಕ್ಕೆ ಓದಲು ಕಳುಹಿಸಿದ್ದಕ್ಕಾಗಿ ಅವರು ಮಹಾ ಪಂಡಿತರಾದರು. ಆ ಅಧ್ಯಯನವೇ ಡಾ.ಅಂಬೇಡ್ಕರ್ ಸಂವಿಧಾನ ರಚಿಸಲು ಅನುಕೂಲವಾಯಿತು. ಅವರು ಹೇಳಿದಂತೆ ಹೋರಾಟ ಇರಬೇಕು. ಆದರೆ ಅದು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಸಂಸದ ಡಾ. ಕೆ. ಸುಧಾಕರ್ ಮಾತನಾಡಿ, ಡಾ ಅಂಬೇಡ್ಕರ್ ಜಯಂತಿ ನಮ್ಮ ದೇಶದಲ್ಲಿ ಮಾತ್ರ ಆಚರಣೆ ಮಾಡುತ್ತಿಲ್ಲ. ವಿಶ್ವ ಸಂಸ್ಥೆಯವರೆ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ. ನಾವು ಇವರಿಬ್ಬರ ಜಯಂತಿ ಆಚರಿಸುತ್ತಿಲ್ಲ. ಬದಲಾಗಿ ಪ್ರಜಾಪ್ರಭುತ್ವ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜ್ಞಾನದ ಸಂಕೇತ ಇದರ ತತ್ವಗಳನ್ನು ಆಚರಣೆ ಮಾಡುವ ದಿನ ಎಂದು ಭಾವಿಸಿದ್ದೇನೆ ಎಂದರು.ಅಂಬೇಡ್ಕರ್ ಇದ್ದಂತ ದಿನಮಾನಗಳಲ್ಲಿ ಅವರು ಬದುಕುವುದೇ ಕಷ್ಟವಾಗಿತ್ತು. ಆದರೆ ಅವರೆಂದೂ ಎದೆಗುಂದಲಿಲ್ಲ. ಅವರಿಗೆ ಬಡತನ ಒಂದು ಕಡೆಯಾದರೆ ಅನಿಷ್ಠ ಜಾತಿ ಪದ್ಧತಿ ಒಂದು ಕಡೆ, ಇವುಗಳನ್ನು ಮೆಟ್ಟಿನಿಂತು ಶಿಕ್ಷಣ ಪಡೆದು ದೇಶದ ಸಂವಿಧಾನ ರಚಿಸುವ ಮಟ್ಟಕ್ಕೆ ಹೋಗಿದ್ದು ನಮಗೆಲ್ಲ ಆದರ್ಶಪ್ರಾಯವಾಗಿದೆ ಎಂದರು.
5ನೇ ಹಣಕಾಸು ಆಯೋಗ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ, ಅತ್ಯಂತ ಸ್ಮರಣೀಯ ನಾಯಕರೆಂದರೆ ಬಾಬೂಜಿ ಹಾಗೂ ಡಾ. ಅಂಬೇಡ್ಕರ್ ಅವರು. ವ್ಯಕ್ತಿಯ ಆಡಳಿತಕ್ಕಿಂತ ಕಾನೂನಿನ ಆಡಳಿತ ಬೇಕೆಂದು ಪ್ರತಿಪಾದಿಸಿದ ಅಂಬೇಡ್ಕರ್ 1977ರ ಚುನಾವಣೆ ಸಂದರ್ಭದಲ್ಲಿ ದೇವನಹಳ್ಳಿ ಸಂತೆ ಮೈದಾನದಲ್ಲಿ ಬಾಬೂಜಿರವರ ಇಂಗ್ಲಿಷ್ ಭಾಷಣವನ್ನು ಕನ್ನಡಕ್ಕೆ ಅನುವಾದಿಸುವ ಸುಯೋಗ ನನಗೆ ಸಿಕ್ಕಿದ್ದನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಡಾ. ಪ್ರಕಾಶ್ ಮಂಟೇರ, ಹಾಗೂ ಹಂಪಸಂದ್ರದ ಪ್ರಾಧ್ಯಾಪಕ ಡಾ. ಎಂ. ನಾರಾಯಣಸ್ವಾಮಿ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ. ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ಮುಖಂಡರಾದ ಲೋಕೇಶ್, ಮುದಗುರ್ಕಿ ನಾರಾಯಣಸ್ವಾಮಿ, ಪುರಸಭಾಧ್ಯಕ್ಷ ಮುನಿಕೃಷ್ಣ, ಮಾಜಿ ಅಧ್ಯಕ್ಷ ಡಾ. ಮೂರ್ತಿ ಹಾಗೂ ತಹಸೀಲ್ದಾರ್ ಬಾಲಕೃಷ್ಣ, ತಾಪಂ ಇಒ ಶ್ರೀನಾಥಗೌಡ ಉಪಸ್ಥಿತರಿದ್ದರು.