ದೇಶದ ಏಕತೆಗೆ ಯುವಕರು ಪ್ರಾಮಾಣಿಕವಾಗಿ ಶ್ರಮಿಸಿ

| Published : Aug 16 2024, 12:57 AM IST

ಸಾರಾಂಶ

ಪ್ರತಿಯೊಬ್ಬರೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು

ಕನ್ನಡಪ್ರಭ ವಾರ್ತೆ ಕನಕಪುರ

ಪ್ರತಿಯೊಬ್ಬರೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.

ಕಸಬಾ ಹೋಬಳಿಯ ಜವನಮ್ಮನದೊಡ್ಡಿ ಹಾಗೂ ಚಾಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ, ಹೋರಾಟ ಮಾಡಿದವರನ್ನು ನೆನಪಿಸುವುದೇ ಸ್ವಾತಂತ್ರ‍್ಯ ದಿನಾಚರಣೆಯ ಉದ್ದೇಶ. ಎಲ್ಲರೂ ದೇಶದ ಏಕತೆಗೆ ಪ್ರಾಮಾಣಿಕವಾಗಿ ದುಡಿಯುವಂತೆ ಕರೆ ನೀಡಿದರು.

ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯಿದ್ದು, ರಸ್ತೆಗಳು ಅಭಿವೃದ್ಧಿಯಾಗಬೇಕು, ಕೆರೆಗಳ ಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗಡಿ ಭಾಗಗಳಲ್ಲಿ ಕಾಡಾನೆಗಳಿಂದ ಸಾವು- ನೋವು ಹಾಗೂ ಬೆಳೆ ನಾಶದಂತಹ ಪ್ರಕರಣಗಳು ಹೆಚ್ಚಾಗಿದ್ದು, ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕೇಂದ್ರ ಸಚಿವ ನಿತಿನ್ ಗಡ್ಕರಿ, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‌ ಅವರೊಂದಿಗೆ ಚರ್ಚಿಸಿ, ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ. ಅವರಿಂದ ಉತ್ತಮ ಸ್ಪಂದನೆ ದೊರಕಿರುವುದಾಗಿ ತಿಳಿಸಿದರು.

ಬೆಂಗಳೂರು ಸುತ್ತಲಿನ 5 ಸ್ಯಾಟಲೈಟ್ ಟೌನ್‌ಗಳಿಗೆ ಭೂ ಸ್ವಾಧೀನಕ್ಕಾಗಿ ಶೇ.70 ರಷ್ಟು ಅನುದಾನ ಕೇಂದ್ರ ಸರ್ಕಾರ ನೀಡಿದ್ದು, ಉಳಿದ ಶೇ. 30 ಅನುದಾನ ರಾಜ್ಯ ಸರ್ಕಾರ ನೀಡಬೇಕಾಗಿದೆ. ಆದರೆ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಆದರೂ ಸಹ ಕೇಂದ್ರ ಸಚಿವ ಗಡ್ಕರಿ 45 ದಿನಗಳೊಳಗಾಗಿ ಯೋಜನೆಗೆ ಹಣ ಮಂಜೂರಾತಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈ ಯೋಜನೆಗೆ ಕೇಂದ್ರದಿಂದ 1400 ಕೋಟಿ ರು. ಹಾಗೂ ರಾಜ್ಯ ಸರ್ಕಾರದಿಂದ 630 ಕೋಟಿ ರು. ಅಗತ್ಯವಿದ್ದು, ಕೇಂದ್ರದ ಪಾಲು ದೊರಕಲಿದೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ತಡೆ ಬೇಲಿ ನಿರ್ಮಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನ್‌ವೈಷ್ಣವ್ ರೈಲು ಕಂಬಿಗಳನ್ನು ಕಡಿಮೆ ದರದಲ್ಲಿ ಪೂರೈಸುವುದಾಗಿ ತಿಳಿಸಿದ್ದಾರೆ ಎಂದರು.

ಚಾಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ಎನ್.ಡಿ.ಎ ಕಾರ್ಯಾಲಯಕ್ಕೆ ಚಾಲನೆ ನೀಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು, ರಾಜ್ಯ ಜೆಡಿಎಸ್ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ, ಹಿರಿಯ ಮುಖಂಡರಾದ ಸಿದ್ಧಮರಿಗೌಡ, ಕೊತ್ತನೂರು ನಾರಾಯಣ, ನಗರಸಭಾ ಸದಸ್ಯರಾದ ಸ್ಟೂಡಿಯೋ ಚಂದ್ರು, ಕುರುಪೇಟೆ ಲೋಕೇಶ್, ಬಿಜೆಪಿ ಗ್ರಾಮೀಣ ಅಧ್ಯಕ್ಷ ಕೊತ್ತನೂರು ಕೆ.ಪಿ.ಕುಮಾರ್, ರೈತ ಮೋರ್ಚ ಅಧ್ಯಕ್ಷ ನಾಗಾನಂದ, ಗ್ರಾಮೀಣ ಯುವ ಬಿಜೆಪಿ ಅಧ್ಯಕ್ಷ ಅಶ್ವಥ್, ಪ್ರಧಾನ ಕಾರ್ಯದರ್ಶಿ ಪಾಲಾಕ್ಷ, ಮಹಿಳಾ ಘಟಕದ ಪವಿತ್ರ, ಜೆಡಿಎಸ್ ಮಹಿಳಾಧ್ಯಕ್ಷೆ ಶೋಭಾ, ಕುರಿಗೌಡನದೊಡ್ಡಿ ಕುಮಾರ್, ಗ್ರಾ.ಪಂ ಸದಸ್ಯ ತೊಪ್ಪಗನಹಳ್ಳಿ ರಾಜ ಗೋಪಾಲ್, ನಲ್ಲಹಳ್ಳಿ ಶಿವಕುಮಾರ್, ಗೇರಹಳ್ಳಿ ರಾಜೇಶ್, ಬೆಟ್ಟೇಗೌಡನದೊಡ್ಡಿ ಮಂಜುನಾಥ್ ಉಪಸ್ಥಿತರಿದ್ದರು.