ವಿಜಯಪುರ: ಇಂದಿನ ಯುವಕರು ದೇಶದ ಭವಿಷ್ಯ. ಆದರೆ, ಮಾದಕ ವಸ್ತುಗಳ ಚಟವು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ತೀವ್ರವಾಗಿ ಬಾಧಿಸುತ್ತಿದ್ದು, ಮಕ್ಕಳು ಎಚ್ಚರಿಕೆಯಿಂದ ಇರಬೇಕು ಎಂದು ಪುರಸಭಾ ಮಾಜಿ ಸದಸ್ಯ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ಸದಸ್ಯ ಬಲಮುರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳೆಂದರೆ, ಮೆದುಳು ಮತ್ತು ದೇಹದ ಕಾರ್ಯಚಟುವಟಿಕೆಯನ್ನು ಬದಲಾಯಿಸುವ ರಾಸಾಯನಿಕ ಪದಾರ್ಥಗಳು. ೬ನೇ ತರಗತಿಯಿಂದಲೇ ಆರೋಗ್ಯ ಶಿಕ್ಷಣ ಅವಧಿಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಪೋಸ್ಟರ್, ಪ್ರಬಂಧ, ಭಾಷಣ ಸ್ಪರ್ಧೆ ಆಯೋಜನೆ ಮಾಡಬೇಕು, ನಾಟಕ ಪ್ರದರ್ಶನ, ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ಮಾಡಿಸಿ ಎಂದು ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಪೋಷಕರು ದಿನಕ್ಕೆ ೩೦ ನಿಮಿಷ ಮಕ್ಕಳ ಜೊತೆ ಮುಕ್ತವಾಗಿ ಮಾತುಕತೆ ನಡೆಸಿ, ಮಕ್ಕಳ ಸ್ನೇಹಿತರು ಯಾರು ಎಂದು ತಿಳಿದುಕೊಳ್ಳಿ, ಮನೆಗೆ ಕರೆಯಿರಿ, ಮಕ್ಕಳಿಗೆ ನೀವೇ ಮಾದರಿಯಾಗಬೇಕು. ಮಕ್ಕಳ ಮುಂದೆ ಧೂಮಪಾನ, ಮದ್ಯಪಾನ ಮಾಡಬೇಡಿ, ಮಕ್ಕಳ ಫೋನ್, ಬ್ಯಾಗ್ ಆಗಾಗ ಚೆಕ್ ಮಾಡಿ, ಆದರೆ, ಅವರ ಖಾಸಗಿತನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ, ಅವರಿಗೆ ಧೈರ್ಯ ಹೇಳಿ, ಮಾದಕ ವಸ್ತುಗಳಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಅವರಿಗೆ ತಿಳಿ ಹೇಳಬೇಕು ಎಂದರು.

ಶಾಲೆಯ ಮುಖ್ಯಶಿಕ್ಷಕಿ ಸುಜಾತಮ್ಮ ಮಾತನಾಡಿ ಮಕ್ಕಳಿಗೆ ಉಪನ್ಯಾಸ ನೀಡಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಅಂಜಲಿ ಪ್ರೇಮ್ ಕುಮಾರ್, ಶಾಲೆಯ ಶಿಕ್ಷಕರು ಹಾಜರಿದ್ದರು.