ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆ ಇದ್ದರೂ ಕೂಡ ಕೆಲವು ಪೋಷಕರು ತಮ್ಮ ಮಕ್ಕಳಿಂದ ಭಿಕ್ಷೆ ಬೇಡಿಸುತ್ತಿದ್ದಾರೆ. ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು ಅಪರಾಧ. ಅಂಗಡಿ ಸೇರಿದಂತೆ ಇತರೆ ಸ್ಥಳಗಳಲ್ಲಿ ಮಕ್ಕಳು ದುಡಿಯುತ್ತಿರುವುದು ಕಂಡು ಬಂದರೇ ಮಾಲೀಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವುದು ಗಂಭೀರ ಅಪರಾಧ. ಬೀದಿಬದಿ ಮಕ್ಕಳ ರಕ್ಷಣೆಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಭಿಕ್ಷೆ ಬೇಡುವ ಮಕ್ಕಳು ಕಂಡರೇ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ ತಿಳಿಸಿದರು.ಪಟ್ಟಣದ ಆನಂತ್‌ರಾಂ ವೃತ್ತ, ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಭಿಕ್ಷಾಟಣೆ ಮತ್ತು ಬೀದಿಬದಿ ಮಕ್ಕಳ ರಕ್ಷಣಾ ಕಾರ್ಯಾಚರಣೆ ಹಾಗೂ ವಿದ್ಯಾರ್ಥಿಗಳ ಜಾಗೃತಿ ಜಾಥಾ ನಡೆಸಿದ ಬಳಿಕ ಮಾತನಾಡಿದರು.
ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆ ಇದ್ದರೂ ಕೂಡ ಕೆಲವು ಪೋಷಕರು ತಮ್ಮ ಮಕ್ಕಳಿಂದ ಭಿಕ್ಷೆ ಬೇಡಿಸುತ್ತಿದ್ದಾರೆ. ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು ಅಪರಾಧ. ಅಂಗಡಿ ಸೇರಿದಂತೆ ಇತರೆ ಸ್ಥಳಗಳಲ್ಲಿ ಮಕ್ಕಳು ದುಡಿಯುತ್ತಿರುವುದು ಕಂಡು ಬಂದರೇ ಮಾಲೀಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ಶಿಕ್ಷಣ ಸಿಗುವಂತೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಹೇಳಿದರು.ಆಧುನಿಕತೆ ಎಷ್ಟೆ ಮುಂದುವರಿದರೂ ಕೂಡ ಬಾಲ್ಯ ವಿವಾಹ ಪದ್ಧತಿ ಇಂದಿಗೂ ಜೀವಂತವಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಪೋಷಕರು ತಮ್ಮ ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಅಧಿಕಾರಿಗಳ ಜೊತೆಗೆ ಕೈ ಜೋಡಿಸಬೇಕು ಎಂದರು.
ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದ ಕೂಡಲೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಅನಿಷ್ಠ ಪದ್ಧತಿಗಳನ್ನು ದೂರ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದರು.ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಕರಪತ್ರಗಳನ್ನು ವಿತರಿಸಿ ಬಾಲ್ಯವಿವಾಹ, ಮಕ್ಕಳ ಭಿಕ್ಷಾಟನೆ ಬಗ್ಗೆ ತಿಳಿವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕೆ.ಎಂ.ಮಹದೇವ್, ವಿನುತಕುಮಾರಿ, ಕ್ಷೇತ್ರ ಕಾರ್ಯಕರ್ತರಾದ ಶಂಕರ್, ವಿದ್ಯಾ, ವಿಮಲ, ಪೊಲೀಸ್ ಇಲಾಖೆ ಎಎಸ್‌ಐ ರಮೇಶ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಇದ್ದರು.