ರಾಜ್ಯಾದ್ಯಂತ ಉಪ ನೋಂದಣಿ ಕಚೇರಿಗಳಲ್ಲಿ ವ್ಯಕ್ತಿಯ ಭೌತಿಕ ಉಪಸ್ಥಿತಿ ಇಲ್ಲದೆ ‘ಇ-ನೋಂದಣಿ’ ಮೂಲಕ ದಸ್ತಾವೇಜುಗಳ ನೋಂದಣಿಗೆ ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಗೆ ಉಭಯ ಸದನಗಳಲ್ಲಿ ಸೋಮವಾರ ಚರ್ಚೆಯೇ ಇಲ್ಲದೆ ಅಂಗೀಕಾರ

ವಿಧಾನಮಂಡಲ : ರಾಜ್ಯಾದ್ಯಂತ ಉಪ ನೋಂದಣಿ ಕಚೇರಿಗಳಲ್ಲಿ ವ್ಯಕ್ತಿಯ ಭೌತಿಕ ಉಪಸ್ಥಿತಿ ಇಲ್ಲದೆ ‘ಇ-ನೋಂದಣಿ’ ಮೂಲಕ ದಸ್ತಾವೇಜುಗಳ ನೋಂದಣಿಗೆ ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಗೆ ಉಭಯ ಸದನಗಳಲ್ಲಿ ಸೋಮವಾರ ಚರ್ಚೆಯೇ ಇಲ್ಲದೆ ಅಂಗೀಕಾರ ದೊರೆತಿದೆ.

ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ, ‘ನೋಂದಣಿ ಪ್ರಕ್ರಿಯೆಯನ್ನು ಸರಳೀಕರಿಸುವ ಉದ್ದೇಶದೊಂದಿಗೆ ಮಸೂದೆ ಸಿದ್ಧಪಡಿಸಲಾಗಿದೆ. ಆಸ್ತಿ ನೋಂದಣಿ ಸಮಯದಲ್ಲಿ ಉಪ-ನೋಂದಣಾಧಿಕಾರಿಗಳು (ಸಬ್‌ ರಿಜಿಸ್ಟ್ರಾರ್) ಸೂಕ್ತ ಪರಿಶೀಲನೆ ನಡೆಸುವುದನ್ನು ಖಚಿತಪಡಿಸಿಕೊಳ್ಳಲು, ನಗರ ಪ್ರದೇಶಗಳಲ್ಲಿ ಅಕ್ರಮ ಆಸ್ತಿ ನೋಂದಣಿ ತಡೆಯಲು ಮತ್ತು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಆಸ್ತಿ ತಂತ್ರಾಂಶಗಳನ್ನು ಸಂಯೋಜಿಸುವ ಅಂಶವನ್ನು ಪ್ರಸ್ತಾಪಿತ ಮಸೂದೆಯಲ್ಲಿ ಸೇರ್ಪಡೆಗೊಳಿಸಲಾಗಿದೆ’ ಎಂದು ತಿಳಿಸಿದರು.

ಇ-ನೋಂದಣಿಗೆ ಅವಕಾಶ:

ವಿಶೇಷವಾಗಿ, ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಖರೀದಿದಾರರು ಹಾಗೂ ಮಾರಾಟಗಾರರ ಭೌತಿಕ ಉಪಸ್ಥಿತಿಯಿಲ್ಲದೆ ಕಡ್ಡಾಯವಾಗಿ ನೋಂದಾಯಿಸಬೇಕಾದ ಕೆಲವು ದಾಖಲೆಗಳ ಮೂಲಕ ಇ-ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಆ ಮೂಲಕ ಖರೀದಿದಾರ ಅಥವಾ ಮಾರಾಟಗಾರ ಉಪನೋಂದಣಿ ಕಚೇರಿಗೆ ಹೋಗಬೇಕಾಗಿಲ್ಲ. ತಾವಿರುವ ಸ್ಥಳದಿಂದಲೇ ಇ- ಖಾತಾ ಸಹಿತ ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕ ದಾಖಲೆಗಳ ನೋಂದಣಿ ಮಾಡಬಹುದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ ಮೂಲಕ ಸಲ್ಲಿಕೆ ವೇಳೆ ದಾಖಲೆ, ಎಂಡೋರ್ಸ್‌ಮೆಂಟ್‌ ಸಹಿ, ಮೊಹರು ಹಾಕುವ ವಿಧಾನ, ನೋಂದಣಿ ಶುಲ್ಕ ಮತ್ತು ಇತರ ಶುಲ್ಕಗಳ ಪಾವತಿಯ ವಿಧಾನ ಹಾಗೂ ಅಂತಹ ಇತರ ಪ್ರಕ್ರಿಯೆಗಳನ್ನು ವಿವರಿಸಲಾಗುತ್ತದೆ

ಯಾವ ದಾಖಲೆ ನೋಂದಣಿ ಇಲ್ಲ?:

ಪ್ರಸ್ತುತ ಜಾರಿಯಲ್ಲಿರುವ ಕೇಂದ್ರ ಅಥವಾ ರಾಜ್ಯ ಕಾಯ್ದೆಗಳ ಉಪಬಂಧಗಳಿಗೆ (ನಿಯಮಗಳಿಗೆ) ವಿರುದ್ಧವಾಗಿರುವ ದಾಖಲೆಗಳ ನೋಂದಣಿ ತಿರಸ್ಕರಿಸಬೇಕು.

ಜತೆಗೆ ಇ-ಸ್ವತ್ತು ವ್ಯವಸ್ಥೆಯೊಂದಿಗೆ ಸಂಯೋಜನೆಯಾಗದ ಸ್ವತ್ತಿನ ದಾಖಲೆಗಳ ನೋಂದಣಿ ತಿರಸ್ಕರಿಸಬೇಕು. ಮಾರಾಟ ಮಾಡಲು ಉದ್ದೇಶಿಸಿರುವ ಆಸ್ತಿ ಅಥವಾ ಜಮೀನಿನ ನಕ್ಷೆ, ಭೂ ಪರಿವರ್ತನೆ ಆದೇಶ, ಮಂಜೂರಾದ ಪ್ಲಾನ್, ವಿದ್ಯುನ್ಮಾನ ಖಾತಾ (ಇ-ಖಾತಾ) ಅಥವಾ ಮಾಲೀಕತ್ವದ ಹಕ್ಕುಪತ್ರ ಸೇರಿದಂತೆ ರಾಜ್ಯ ಸರ್ಕಾರ ಸೂಚಿಸಬಹುದಾದ ದಾಖಲೆಗಳನ್ನು ನೀಡಬೇಕು. ಇಲ್ಲದಿದ್ದರೆ ಸ್ಥಿರ ಸ್ವತ್ತಿನ ಮಾರಾಟ ಒಪ್ಪಂದ, ಮಾರಾಟ, ವಿನಿಮಯ, ಗುತ್ತಿಗೆ ಅಥವಾ ಇನ್ನಿತರ ರೀತಿಯ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳ ನೋಂದಣಿಯನ್ನು ಕಡ್ಡಾಯವಾಗಿ ತಿರಸ್ಕರಿಸಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ನಲ್ಲೇ ದಾಖಲೆ:

ದಾಖಲೆ ಸಂಗ್ರಹಿಸುವಲ್ಲಿನ ವಿಳಂಬ ತಪ್ಪಿಸಲು ಕೇಂದ್ರೀಕೃತ ವರ್ಚುಯಲ್ ವಿತರಣಾ ವ್ಯವಸ್ಥೆಯ ಮೂಲಕ ಪ್ರಮಾಣಿಕೃತ ಪ್ರತಿಗಳನ್ನು ಆನ್‌ಲೈನ್‌ನಲ್ಲೇ ಒದಗಿಸಲು ಅವಕಾಶ ನೀಡಲಾಗಿದೆ.