ನಾನು ಆರ್‌ಎಸ್‌ಎಸ್‌ನ ವಿಚಾರಧಾರೆಯನ್ನು ಸಮರ್ಥಿಸಲು ಈ ಪ್ರಶ್ನೆಯನ್ನು ಎತ್ತುತ್ತಿಲ್ಲ. ಯಾರಿಗಾದರೂ ಆರ್‌ಎಸ್‌ಎಸ್‌ನ ವಿಚಾರಧಾರೆ ಇಷ್ಟವಿಲ್ಲದಿದ್ದರೆ ಅದನ್ನು ಟೀಕಿಸುವ ಸಂಪೂರ್ಣ ಹಕ್ಕಿದೆ.
ನಾನು ಆರ್‌ಎಸ್‌ಎಸ್‌ನ ವಿಚಾರಧಾರೆಯನ್ನು ಸಮರ್ಥಿಸಲು ಈ ಪ್ರಶ್ನೆಯನ್ನು ಎತ್ತುತ್ತಿಲ್ಲ. ಯಾರಿಗಾದರೂ ಆರ್‌ಎಸ್‌ಎಸ್‌ನ ವಿಚಾರಧಾರೆ ಇಷ್ಟವಿಲ್ಲದಿದ್ದರೆ ಅದನ್ನು ಟೀಕಿಸುವ ಸಂಪೂರ್ಣ ಹಕ್ಕಿದೆ. ಅದರ ರಾಜಕೀಯ ಪ್ರಭಾವವನ್ನು ಪ್ರಶ್ನಿಸಬಹುದು. ಅದರ ಇತಿಹಾಸವನ್ನು ಚರ್ಚಿಸಬಹುದು. ಅದರ ಕಾರ್ಯವಿಧಾನವನ್ನುವಿಮರ್ಶಿಸಬಹುದು.
ಆದರೆ ವಿಚಾರಧಾರೆಗೆ ಉತ್ತರ ವಿಚಾರಧಾರೆಯಿಂದಲೇ ಬರಬೇಕು; ಕಾನೂನನ್ನು ರಾಜಕೀಯ ಆಯುಧವನ್ನಾಗಿ ಮಾಡಬಾರದು.
-ಆರ್.ಅಶೋಕ, ವಿರೋಧ ಪಕ್ಷದ ನಾಯಕರು, ಕರ್ನಾಟಕ ವಿಧಾನಸಭೆ.
ಕರ್ನಾಟಕ ಸರ್ಕಾರದ ‘Karnataka Regulation of Use of Government Premises and Public Property Bill, 2026’ ಅನ್ನು ಸಾರ್ವಜನಿಕ ಆಸ್ತಿಯ ಸಮರ್ಪಕ ಬಳಕೆ ಮತ್ತು ಸಂರಕ್ಷಣೆಗೆ ಅಗತ್ಯವಾದ ಒಂದು ಸಾಮಾನ್ಯ ನಿಯಂತ್ರಣಾತ್ಮಕ ಕಾನೂನು ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು ಎಂಬ ವಿಚಾರದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿರಲು ಸಾಧ್ಯವಿಲ್ಲ. ಆದರೆ, ಒಂದು ಕಾನೂನಿನ ಪದಗಳನ್ನು ಮಾತ್ರವಲ್ಲ, ಅದು ಹುಟ್ಟಿದ ಸಂದರ್ಭ, ಅದರ ಹಿಂದಿನ ಆಡಳಿತಾತ್ಮಕ ನಡೆ, ಅದರ ಸುತ್ತಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಅದು ಸರ್ಕಾರಕ್ಕೆ ನೀಡುವ ಅಧಿಕಾರಗಳ ಸ್ವರೂಪವನ್ನು ಪರಿಶೀಲಿಸಿದಾಗ ಗಂಭೀರ ಪ್ರಶ್ನೆಗಳು ಎದುರಾಗುತ್ತವೆ. ಸರ್ಕಾರಿ ಆಸ್ತಿಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಆದರೆ ಆ ನೆಪದಲ್ಲಿ ನಾಗರಿಕರ ಸಂವಿಧಾನಾತ್ಮಕ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಅಧಿಕಾರವನ್ನು ಸರ್ಕಾರ ತನ್ನ ಕೈಗೆ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ.ಈ ಮಸೂದೆಯ ಕುರಿತು ನನ್ನ ಮುಖ್ಯ ಆತಂಕ ಇದೇ.
ಕಳೆದ ಒಂದು ವರ್ಷದ ಬೆಳವಣಿಗೆಗಳನ್ನು ಕ್ರಮವಾಗಿ ನೋಡಿದಾಗ ಈ ಆತಂಕ ಇನ್ನಷ್ಟು ಗಂಭೀರವಾಗುತ್ತದೆ. 2025ರ ಅಕ್ಟೋಬರ್‌ನಲ್ಲಿ ಸರ್ಕಾರಿ ಮೈದಾನಗಳು, ಶಾಲಾ-ಕಾಲೇಜುಗಳ ಆವರಣ ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಸಂಘಟನೆಗಳು ಬಳಸುವ ಮೊದಲು ಪೂರ್ವಾನುಮತಿ ಪಡೆಯಬೇಕೆಂಬ ಆದೇಶ ಹೊರಬಂತು. ಇದೇ ಅವಧಿಯಲ್ಲಿ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಸಂಬಂಧಿಸಿದ ವಿವಾದ ರಾಜ್ಯದ ರಾಜಕೀಯ ಚರ್ಚೆಯ ಕೇಂದ್ರವಾಯಿತು. ನಂತರ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತು.
ಪ್ರಶ್ನಿಸುವುದು ನಮ್ಮ ಹಕ್ಕು:
2026ರ ಜೂನ್‌ನಲ್ಲಿ, ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸರಸಂಘಚಾಲಕರಿಗೆ ಬಹಿರಂಗ ಪತ್ರ ಬರೆದು, ಸಂಘಟನೆಯ ನೋಂದಣಿ, ಹಣಕಾಸು ಮತ್ತು ಅದರ ಚಟುವಟಿಕೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದರು. ಈಗ, ಅದೇ ಸರ್ಕಾರ ಸಾರ್ವಜನಿಕ ಆಸ್ತಿಗಳ ಬಳಕೆಯನ್ನು ನಿಯಂತ್ರಿಸುವ ಹೊಸ ಕಾನೂನನ್ನು, ಕಠಿಣ ದಂಡಾತ್ಮಕ ವಿಧಿಗಳೊಂದಿಗೆ, ಈ ಸದನದ ಮುಂದೆ ತಂದಿದೆ. ಪ್ರತಿಯೊಂದು ಘಟನೆ ಪ್ರತ್ಯೇಕವಾಗಿ ನೋಡಿದರೆ ಸರ್ಕಾರಕ್ಕೆ ತನ್ನದೇ ಆದ ವಿವರಣೆ ಇರಬಹುದು. ಆದರೆ ರಾಜಕೀಯದಲ್ಲಿ ಕಾಲ ಕ್ರಮವೂ ಒಂದು ಸಾಕ್ಷ್ಯ.
ಚಿತ್ತಾಪುರದ ವಿವಾದ.
ಸಾರ್ವಜನಿಕ ಆಸ್ತಿ ಬಳಕೆಯ ಮೇಲಿನ ಹೊಸ ನಿಯಂತ್ರಣ.
ನಿರ್ದಿಷ್ಟ ಸಂಘಟನೆಯ ಕುರಿತು ಗೃಹ ಸಚಿವರ ಬಹಿರಂಗ ಪತ್ರ.
ಮತ್ತು ಈಗ ಹೊಸ ಕಾನೂನು.
ಹೀಗಿರುವಾಗ, ಈ ಮಸೂದೆ ಸಂಪೂರ್ಣವಾಗಿ ಸಾಮಾನ್ಯ ಮತ್ತು ತಟಸ್ಥ ನಿಯಂತ್ರಣಕ್ಕಾಗಿ ಮಾತ್ರ ಎಂಬ ಸರ್ಕಾರದ ವಾದವನ್ನು ಪ್ರಶ್ನಿಸುವುದು ವಿರೋಧ ಪಕ್ಷದ ಕರ್ತವ್ಯ.
ನಾನು ಆರ್‌ಎಸ್‌ಎಸ್‌ನ ವಿಚಾರಧಾರೆಯನ್ನು ಸಮರ್ಥಿಸಲು ಈ ಪ್ರಶ್ನೆಯನ್ನು ಎತ್ತುತ್ತಿಲ್ಲ. ಯಾರಿಗಾದರೂ ಆರ್‌ಎಸ್‌ಎಸ್‌ನ ವಿಚಾರಧಾರೆ ಇಷ್ಟವಿಲ್ಲದಿದ್ದರೆ ಅದನ್ನು ಟೀಕಿಸುವ ಸಂಪೂರ್ಣ ಹಕ್ಕಿದೆ. ಅದರ ರಾಜಕೀಯ ಪ್ರಭಾವವನ್ನು ಪ್ರಶ್ನಿಸಬಹುದು. ಅದರ ಇತಿಹಾಸವನ್ನು ಚರ್ಚಿಸಬಹುದು. ಅದರ ಕಾರ್ಯವಿಧಾನವನ್ನುವಿಮರ್ಶಿಸಬಹುದು.
ಆದರೆ ವಿಚಾರಧಾರೆಗೆ ಉತ್ತರ ವಿಚಾರಧಾರೆಯಿಂದಲೇ ಬರಬೇಕು; ಕಾನೂನನ್ನು ರಾಜಕೀಯ ಆಯುಧವನ್ನಾಗಿ ಮಾಡಬಾರದು. ಪ್ರಜಾಪ್ರಭುತ್ವದ ಸೌಂದರ್ಯವೆಂದರೆ ನಮ್ಮನ್ನು ಇಷ್ಟಪಡುವವರ ಹಕ್ಕುಗಳನ್ನು ರಕ್ಷಿಸುವುದಲ್ಲ; ನಮ್ಮನ್ನು ವಿರೋಧಿಸುವವರ ಹಕ್ಕುಗಳನ್ನೂ ರಕ್ಷಿಸುವುದು. ಸರ್ಕಾರ ಈ ಮಸೂದೆ ಯಾರನ್ನೂ ಗುರಿಯಾಗಿಸಿಕೊಂಡಿಲ್ಲ ಎಂದು ಹೇಳುತ್ತದೆ. ಹಾಗಿದ್ದರೆ ನಾನು ಸರ್ಕಾರಕ್ಕೆ ಒಂದು ಸರಳ ಸವಾಲು ಹಾಕುತ್ತೇನೆ.
ಸಂಘಟನೆಗಳ ವಿವರ ನೀಡುತ್ತೀರಾ?:
ಕಳೆದ ಐದು ವರ್ಷಗಳಲ್ಲಿ ಸರ್ಕಾರಿ ಆವರಣಗಳನ್ನು ಬಳಸಿದ ಎಲ್ಲಾ ಸಂಘಟನೆಗಳ ಸಂಪೂರ್ಣ ವಿವರವನ್ನು ಸದನದ ಮುಂದೆ ಇಡಲಿ. ಯಾವ ಸಂಘಟನೆಗೆ ಯಾವ ಸಂದರ್ಭದಲ್ಲಿ ಅನುಮತಿ ನೀಡಲಾಯಿತು? ಯಾರಿಗೆ ನಿರಾಕರಿಸಲಾಯಿತು? ಯಾವ ಮಾನದಂಡದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಯಿತು? ಎಷ್ಟು ಪ್ರಕರಣಗಳಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯಾಯಿತು? ಈಗಿರುವ ಕಾನೂನುಗಳು ಯಾವ ಪ್ರಕರಣಗಳಲ್ಲಿಸಾಕಾಗಲಿಲ್ಲ? ಡೇಟಾ ನೀಡಿ. ದಾಖಲೆ ನೀಡಿ. ಕಾರಣ ನೀಡಿ.
‘ಇದು ಎಲ್ಲರಿಗೂ ಅನ್ವಯಿಸುತ್ತದೆ’ ಎಂಬ ರಾಜಕೀಯ ಘೋಷಣೆಗಿಂತ ಈ ಪಾರದರ್ಶಕತೆ ಹೆಚ್ಚು ವಿಶ್ವಾಸಾರ್ಹ.
ಇನ್ನೊಂದು ಗಂಭೀರ ಪ್ರಶ್ನೆ. ಮಸೂದೆಯಡಿ ಅಧಿಕಾರಿಗಳಿಗೆ ನೀಡಲಾಗುವ ವಿವೇಚನಾ ಅಧಿಕಾರಕ್ಕೆ ಸಂಬಂಧಿಸಿದೆ. ಸರ್ಕಾರಿ ಮೈದಾನದಲ್ಲಿ ಒಂದು ಕಾರ್ಯಕ್ರಮ ನಡೆಸಲು ನಾಗರಿಕರು ಅಥವಾ ಸಂಘಟನೆಗಳು ಅನುಮತಿ ಕೇಳಿದಾಗ, ಅನುಮತಿ ನೀಡುವ ಮತ್ತು ನಿರಾಕರಿಸುವ ಮಾನದಂಡಗಳು ಸ್ಪಷ್ಟವಾಗಿರಬೇಕು. ನಿರಾಕರಣೆಗೆ ಲಿಖಿತ ಕಾರಣ ನೀಡುವುದು ಕಡ್ಡಾಯವಾಗಬೇಕು. ಮೇಲ್ಮನವಿ ವ್ಯವಸ್ಥೆ ಇರಬೇಕು. ಅಧಿಕಾರಿಯ ನಿರ್ಧಾರ ರಾಜಕೀಯ ಒತ್ತಡಕ್ಕೆ ಒಳಗಾಗದಂತೆ ಸುರಕ್ಷತಾ ವ್ಯವಸ್ಥೆ ಇರಬೇಕು.
ಇಲ್ಲವಾದರೆ, ಕಾನೂನು ನಿಯಂತ್ರಣದ ಚೌಕಟ್ಟಾಗುವುದಿಲ್ಲ; ಅಧಿಕಾರಿಯ ವಿವೇಚನೆಯ ಚೌಕಟ್ಟಾಗುತ್ತದೆ.
ಇದು ಕೇವಲ ಆಡಳಿತಾತ್ಮಕ ಸಮಸ್ಯೆಯಲ್ಲ. ಇದು ಸಂವಿಧಾನದ ಪ್ರಶ್ನೆ.
ಭಾರತೀಯ ಸಂವಿಧಾನದ ಆರ್ಟಿಕಲ್ 19 ನಾಗರಿಕರಿಗೆ ಮಾತಿನ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆ ಸೇರುವ ಹಕ್ಕು ಮತ್ತು ಸಂಘಟನೆಗಳನ್ನು ರಚಿಸುವ ಹಕ್ಕನ್ನು ನೀಡುತ್ತದೆ. ಈ ಹಕ್ಕುಗಳು ನಿರ್ಬಂಧ ರಹಿತವಲ್ಲ ಎಂಬುದು ನಮಗೂ ಗೊತ್ತು. ಸಾರ್ವಜನಿಕ ಸುವ್ಯವಸ್ಥೆ, ಭದ್ರತೆ ಮತ್ತು ಇತರ ಸಂವಿಧಾನಾತ್ಮಕ ಕಾರಣಗಳಿಗಾಗಿ ಸಮಂಜಸವಾದ ನಿರ್ಬಂಧಗಳನ್ನು ವಿಧಿಸಬಹುದು. ಆದರೆ ನಿರ್ಬಂಧವು ಸಮಂಜಸವಾಗಿರಬೇಕು, ಸಮಾನವಾಗಿರಬೇಕು, ಪಾರದರ್ಶಕವಾಗಿರಬೇಕು ಮತ್ತು ಪರಿಶೀಲನೆಗೆ ಒಳಪಡಬೇಕು.
ಎಲ್ಲ ಘಟನೆಗೂ ಒಂದೇ ತಕ್ಕಡಿ ಏಕೆ?:
ಸಾರ್ವಜನಿಕ ಆಸ್ತಿಗೆ ಉದ್ದೇಶಪೂರ್ವಕ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಯಾರೂ ವಿರೋಧಿಸುವುದಿಲ್ಲ. ಆದರೆ ಒಂದು ಸಣ್ಣ procedural violation ಮತ್ತು ಗಂಭೀರ ಸಾರ್ವಜನಿಕ ಆಸ್ತಿ ದುರುಪಯೋಗವನ್ನು ಒಂದೇ ರೀತಿಯಲ್ಲಿ ನೋಡುವುದು ನ್ಯಾಯಸಮ್ಮತವಲ್ಲ. ಶಿಕ್ಷೆಯ ಪ್ರಮಾಣವು ಉಲ್ಲಂಘನೆಯ ಸ್ವರೂಪಕ್ಕೆ ಅನುಗುಣವಾಗಿರಬೇಕು. ಇದು ಕಾನೂನಿನ ಮೂಲಭೂತ ತತ್ವವಾದ proportionalityಯ ಪ್ರಶ್ನೆ.
ಇಲ್ಲಿ ಮತ್ತೊಂದು ಆತಂಕವಿದೆ. ಒಂದು ಸಂಘಟನೆಯ ವಿಚಾರಧಾರೆ, ಅದರ ಸದಸ್ಯತ್ವ ಅಥವಾ ಅದರೊಂದಿಗೆ ಇರುವ ರಾಜಕೀಯ ಸಂಬಂಧವನ್ನು ಸರ್ಕಾರಿ ಆಸ್ತಿಯ ಬಳಕೆಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ಮಾನದಂಡವನ್ನಾಗಿ ಮಾಡಬಹುದೇ?
ಸರ್ಕಾರಿ ಮೈದಾನಕ್ಕೆ ಪ್ರವೇಶ ಪಡೆಯಲು ಮೊದಲು ನಾಗರಿಕನಿಗೆ ತನ್ನ ವಿಚಾರಧಾರೆಯ ಪ್ರಮಾಣಪತ್ರ ಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು. ಕರ್ನಾಟಕದ ಸಂವಿಧಾನಾತ್ಮಕ ಸಂಸ್ಕೃತಿ ಇದಕ್ಕಿಂತ ದೊಡ್ಡದು. ಸರ್ಕಾರ ‘ಬಸವ, ಬುದ್ಧ, ಅಂಬೇಡ್ಕರ್’ ಅವರ ಮೌಲ್ಯಗಳನ್ನು ತನ್ನ ಆಡಳಿತದ ಮಾರ್ಗದರ್ಶಕ ತತ್ವಗಳೆಂದು ಹೇಳಿಕೊಳ್ಳುತ್ತದೆ. ಹಾಗಾದರೆ ಅವರ ಪರಂಪರೆಯಿಂದ ನಾವು ಕಲಿಯಬೇಕಾದ ಮುಖ್ಯ ಪಾಠವೇನು? ಅಧಿಕಾರವನ್ನು ಪ್ರಶ್ನಿಸುವ ಹಕ್ಕು. ಸಂಘಟಿತರಾಗುವ ಹಕ್ಕು. ವಿಚಾರವನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಹಕ್ಕು. ಸಾಮಾಜಿಕ ಬದಲಾವಣೆಗೆ ಜನರನ್ನು ಒಗ್ಗೂಡಿಸುವ ಹಕ್ಕು. 12 ನೇ ಶತಮಾನದಲ್ಲಿ ಪ್ರಿಯಾಂಕ್ ಖರ್ಗೆ ಅವರಂತಹ ಮನಸ್ಥಿತಿ ಉಳ್ಳವರು ಅಧಿಕಾರದಲ್ಲಿದ್ದಿದ್ದರೆ ‘ಅನುಭವ ಮಂಟಪ’ ನಡೆಸುವುದಕ್ಕೂ ಅನುಮತಿ ಪಡೆಯಬೇಕಿತ್ತೇನೋ? ನಾಗರಿಕರ ಹಕ್ಕುಗಳು ಸರ್ಕಾರದ ಅನುಮತಿ ಪತ್ರದಿಂದ ಹುಟ್ಟುವುದಿಲ್ಲ. ಅವು ಸಂವಿಧಾನದಿಂದ ಬರುತ್ತವೆ.
ಇಂದು ಈ ಕಾನೂನು ಆರ್‌ಎಸ್‌ಎಸ್ ವಿರುದ್ಧ ಬಳಸಲ್ಪಡುತ್ತದೆ ಎಂದು ಯಾರಾದರೂ ಭಾವಿಸಬಹುದು. ಸರ್ಕಾರ ಅದನ್ನು ನಿರಾಕರಿಸಬಹುದು. ಆದರೆ ನಾಳೆ ಸರ್ಕಾರ ಬದಲಾಗುತ್ತದೆ. ನಾಳೆ ಇದೇ ಅಧಿಕಾರವನ್ನು ಮತ್ತೊಂದು ಸಂಘಟನೆಯ ವಿರುದ್ಧ ಬಳಸಬಹುದು. ಇಂದು ನಿಮಗೆ ಅನುಕೂಲವಾಗುವ ಕಾನೂನು ನಾಳೆ ನಿಮಗೇ ಅನಾನುಕೂಲವಾಗಬಹುದು.
ಆದ್ದರಿಂದ ನಾವು ಇಲ್ಲಿ ಆರ್‌ಎಸ್‌ಎಸ್‌ಗಾಗಿ ಮಾತ್ರ ವಾದಿಸುತ್ತಿಲ್ಲ. ನಾವು ಕಾನೂನಿನ ತಟಸ್ಥತೆಗಾಗಿ ವಾದಿಸುತ್ತಿದ್ದೇವೆ.
ಒಂದು ಸರ್ಕಾರ ಬರುತ್ತದೆ. ಮತ್ತೊಂದು ಸರ್ಕಾರ ಹೋಗುತ್ತದೆ. ಅಧಿಕಾರಿಗಳು ಬದಲಾಗುತ್ತಾರೆ. ರಾಜಕೀಯ ಸಮೀಕರಣಗಳು ಬದಲಾಗುತ್ತವೆ. ಆದರೆ ಕಾನೂನು ಉಳಿಯುತ್ತದೆ.
ಆ ಕಾರಣಕ್ಕೆ ಇಂದು ನಾವು ಮಾಡುವ ಕಾನೂನು ಯಾರನ್ನಾದರೂ ಗುರಿಯಾಗಿಸುವಂತಿರಬಾರದು. ಅದು ನಾಳೆಯ ಕರ್ನಾಟಕದಲ್ಲಿಯೂ ನ್ಯಾಯಯುತವಾಗಿರಬೇಕು. ಸರ್ಕಾರದ ಉದ್ದೇಶ ನಿಜವಾಗಿಯೂ ಸಾರ್ವಜನಿಕ ಆಸ್ತಿಯ ರಕ್ಷಣೆಯಾದರೆ, ವಿರೋಧ ಪಕ್ಷ ಸಹಕರಿಸಲು ಸಿದ್ಧವಿದೆ. ಆದರೆ ಅದಕ್ಕಾಗಿ ಕೆಲವು ಮೂಲಭೂತ ಭದ್ರತೆಗಳು ಕಾನೂನಿನಲ್ಲೇ ಇರಬೇಕು- ಸ್ಪಷ್ಟ ಮಾನದಂಡ, ಲಿಖಿತ ಕಾರಣ, ಮೇಲ್ಮನವಿ ವ್ಯವಸ್ಥೆ, ಅಧಿಕಾರದ ಮಿತಿ, ರಾಜಕೀಯ ಹಸ್ತಕ್ಷೇಪ ತಡೆಯುವ safeguards ಮತ್ತು ಎಲ್ಲರಿಗೂ ಸಮಾನ ಅನ್ವಯ.
ಸಾರ್ವಜನಿಕ ಆಸ್ತಿ ಜನರದ್ದು. ಅದನ್ನು ರಕ್ಷಿಸುವುದು ಅಗತ್ಯ. ಆದರೆ ಸಾರ್ವಜನಿಕ ಸ್ವಾತಂತ್ರ್ಯವೂಜನರದ್ದೇ. ಅದಕ್ಕೂ ರಕ್ಷಣೆ ಅಗತ್ಯ.ಕಾನೂನು ಇರಲಿ- ಆದರೆ ಅದರ ಹಿಂದೆ ರಾಜಕೀಯ ಪ್ರತೀಕಾರ ಇರಬಾರದು.
ನಿಯಂತ್ರಣ ಇರಲಿ-ಆದರೆ selective targeting ಇರಬಾರದು.
ಅಧಿಕಾರ ಇರಲಿ-ಆದರೆ ಅಧಿಕಾರಕ್ಕೆ ಮಿತಿಯೂ ಇರಲಿ.
ಸರ್ಕಾರ ಬದಲಾಗಬಹುದು. ಪಕ್ಷಗಳು ಬದಲಾಗಬಹುದು. ರಾಜಕೀಯ ಸಂದರ್ಭಗಳು ಬದಲಾಗಬಹುದು. ಆದರೆ ಸಂವಿಧಾನ ಬದಲಾಗಬಾರದು. ಕರ್ನಾಟಕದ ಜನರಿಗೆ ಬೇಕಾಗಿರುವುದು ಭಯದ ಆಡಳಿತವಲ್ಲ; ಕಾನೂನಿನ ಆಳ್ವಿಕೆ. ಸರ್ಕಾರಿ ಆಸ್ತಿಗೆ ರಕ್ಷಣೆ ಬೇಕು, ಆದರೆ ಆ ರಕ್ಷಣೆಯ ಹೆಸರಿನಲ್ಲಿ ನಾಗರಿಕರ ಸಂವಿಧಾನಾತ್ಮಕಸ್ವಾತಂತ್ರ್ಯಕ್ಕೆ ಕತ್ತರಿ ಬೇಡ.
ಈ ಮಸೂದೆ ನಿಜವಾಗಿಯೂ ತಟಸ್ಥವಾಗಿದ್ದರೆ, ಸರ್ಕಾರ ಅದನ್ನು ಪಾರದರ್ಶಕವಾಗಿ ಸಾಬೀತುಪಡಿಸಲಿ. ಅಗತ್ಯವಿದ್ದರೆ ತಿದ್ದುಪಡಿ ಮಾಡಲಿ. ಅಧಿಕಾರಗಳಿಗೆ ಮಿತಿ ಹಾಕಲಿ. ನಾಗರಿಕರ ಹಕ್ಕುಗಳಿಗೆ ಭದ್ರತೆ ನೀಡಲಿ.
ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಕಾನೂನು ಮಾಡುವ ಅಧಿಕಾರವಿದೆ; ಆದರೆ ಸಂವಿಧಾನವನ್ನು ಮೀರಿಸುವ ಅಧಿಕಾರ ಯಾರಿಗೂ ಇಲ್ಲ.
ಇದೇ ನಮ್ಮ ನಿಲುವು.
ಇದೇ ನಮ್ಮ ಹೋರಾಟ.
ಮತ್ತು ಇದೇ ಕರ್ನಾಟಕದ ಪ್ರಜಾಪ್ರಭುತ್ವದ ಪರಂಪರೆಯನ್ನು ಉಳಿಸುವ ನಮ್ಮ ಬದ್ಧತೆ.

