ಸಾರಾಂಶ
ಹುಬ್ಬಳ್ಳಿ:
ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿದ್ದಾನೆ ಎಂದು ಆರೋಪಿಸಿ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸುವಲ್ಲಿ ಇಲ್ಲಿನ ಕಸಬಾಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.ಹಳೇಹುಬ್ಬಳ್ಳಿಯ ಜನ್ನತ್ ನಗರದಲ್ಲಿ ಮುಜಫರ್ ಕಲಬುರ್ಗಿ ಎಂಬುವನು ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆಯ ಸಂಬಂಧಿಗಳು ಮುಜಫರ್‌ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ನಂತರ ಜನ್ನತನಗರಕ್ಕೆ ಕರೆದುಕೊಂಡು ಬಂದು ವಿವಸ್ತ್ರಗೊಳಿಸಿ ಮತ್ತೆ ಹಲ್ಲೆಗೆ ಮುಂದಾಗಿದ್ದರು. ಅದನ್ನು ತಡೆಯಲು ಬಂದ ಮಜಫರ್ ತಾಯಿ ಫಾಮಿದಾ ಮೇಲೆಯೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿತ್ತು. ಈ ಕುರಿತು ಇಲ್ಲಿನ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ದಾಖಲಿಸುತ್ತಿದ್ದಂತೆ ಪಿಐ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡವು ಹಲ್ಲೆ ಮಾಡಿದ್ದ ಮಹ್ಮದಅಲಿ ತಾರಿಹಾಳ, ಮಲ್ಲಿಕ್ ತಾರಿಹಾಳ, ಮಾಬುಬಲಿ ತಾರಿಹಾಳ, ಇಸ್ಮಾಯಿಲ್ ಮಾಳೇಕರ, ನದೀಮ್‌ಖಾನ ಕರೆಕಟ್ಟಿ, ಖಾಜಾಮೈನುದ್ದೀನ ಧಾರವಾಡ, ಎಂಡಿ ಸಾಧಿಕ ಸಗರಿ, ಜುಬೇರ ಹಾವೇರಿ, ಎಂಡಿ ಇರ್ಫಾನ್ ಕರೆಕಟ್ಟಿ ಎಂಬುವರನ್ನು ಬಂಧಿಸಿದೆ. ಒಂದು ಆಟೋ, ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ.ಘಟನೆಯ ಕುರಿತು ಮಾಹಿತಿ ನೀಡಿದ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲ್ಲೆ ಮಾಡಿದ್ದ 9 ಜನರನ್ನು ಬಂಧಿಸಲಾಗಿದೆ. ಇನ್ನು ಮಹಿಳೆಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಮುಜಫರ್‌ಗೆ ಕಳೆದ ಐದಾರು ತಿಂಗಳಿನಿಂದ ಬುದ್ಧಿವಾದ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ಅವನ ಮೇಲೆ ಹಲ್ಲೆ ಮಾಡಿರುವುದಾಗಿ ಬಂಧಿತರು ತಿಳಿಸಿದ್ದಾರೆ. ಇವರ ಮೇಲೆ ಕೊಲೆ ಪ್ರಯತ್ನ, ದೊಂಬಿ ಪ್ರಕರಣ ಹಾಕಲಾಗಿದೆ. ಹಾಗೆಯೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಮುಜಫರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಗಳಾದರೆ ಸಂಬಂಧಿಸಿದ ಠಾಣೆಗೆ ದೂರು ಸಲ್ಲಿಸಬೇಕು. ಈ ರೀತಿಯಾಗಿ ಕಾನೂನು ಕೈಗೆ ತಗೆದುಕೊಂಡಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಡಿಸಿಪಿ ಮಹಾನಿಂಗ ನಂದಗಾವಿ, ಪಿಐಗಳಾದ ರಾಘವೇಂದ್ರ ಹಳ್ಳೂರ, ಅಲಿ ಶೇಖ ಸೇರಿದಂತೆ ಹಲವರಿದ್ದರು.