ಸಾರಾಂಶ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ವಿಶ್ವದಲ್ಲಿ ಕಾಫಿ ಉದ್ಯಮಕ್ಕಿಂತ ಉತ್ತಮವಾದದ್ದು ಬೇರೊಂದಿಲ್ಲ. ಇಂದಿನ ಯುವಜನತೆ ಕಾಫಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರಬೇಕು ಎಂದು ಕೇಂದ್ರೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವವೃಂದ ಹೇಳಿದರು.ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಇ-ಕಾಮ್ ಕಾಫಿ ಕಮಾಡಿಟೀಸ್ ಇಂಡಿಯಾ ಸಂಸ್ಥೆ ಹಾಗೂ ಭೈರವಿ ಒಕ್ಕಲಿಗರ ಮಹಿಳಾ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರೋಬಸ್ಟಾ ಕಾಫಿ ಬೆಳೆಗಾರರಿಗೆ ಮಾಹಿತಿ ಶಿಬಿರ, ವಿಚಾರ ಸಂಕೀರ್ಣ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ರೋಬಸ್ಟಾ ಕಾಫಿಗೆ ಇರುವ ಬೆಲೆ ಬೇರೆಲ್ಲಿಯೂ ಇಲ್ಲ. ಇದರ ಗುಣಮಟ್ಟವನ್ನು ನಿರ್ವಹಣೆ ಮಾಡಿದರೆ ಉತ್ತಮ ಬೆಲೆ ಲಭಿಸಲಿದೆ. ಉತ್ಕೃಷ್ಟ ಗುಣಮಟ್ಟ ಕಾಪಾಡಿಕೊಂಡರೆ ಭಾರತೀಯ ಕಾಫಿಯನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಿಲ್ಲ. ತೋಟಗಳಲ್ಲಿ ಪ್ರಾಣಿ, ಪಕ್ಷಿ, ಗಿಡಮರಗಳನ್ನು ಕಾಪಾಡಿಕೊಂಡು ಕಾಫಿಯನ್ನು ನಾವು ಬೆಳೆಯಬೇಕಿದೆ ಎಂದರು. ಭಾರತದಲ್ಲಿ ಪ್ರಸ್ತುತ ಕಾಫಿಯ ಉತ್ಪಾದನೆ 3.25 ಲಕ್ಷ ಟನ್ ಇದ್ದು, ಇದನ್ನು 6 ಲಕ್ಷ ಟನ್‌ಗೆ ಹೆಚ್ಚಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ವಿಯೆಟ್ನಾಮ್ ದೇಶದವರು ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಸ್ಥೆಯಿಂದ ತಂತ್ರಜ್ಞಾನವನ್ನು ಕಲಿತುಕೊಂಡು ಹೋಗಿ ವಿಶ್ವದಲ್ಲಿ ನಂ.1 ಕಾಫಿಯನ್ನು ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಗೆ ಮುಂದಿನ ವರ್ಷ ಶತಮಾನೋತ್ಸವ ವರ್ಷವಾಗಿದ್ದು, ಸಂಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. 2025ರ ಅಕ್ಟೋಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಸತತವಾಗಿ ಕಾಫಿ ಬೆಳೆಗಾರರಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.ಕಾಫಿಯಲ್ಲಿ ಶೇ. 49ಕ್ಕಿಂತ ಅಧಿಕ ಚಿಕೋರಿ ಬಳಸಲು ಅವಕಾಶವಿಲ್ಲವಾಗಿದ್ದು ಶೇ.30ಕ್ಕಿಂತ ಚಿಕೋರಿ ಬಳಸುವಾಗ ಅದನ್ನು ಪ್ಯಾಕೇಟ್ ಮೇಲೆ ಸ್ಪಷ್ಟವಾಗಿ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕೃಷಿ ತಜ್ಞ ರಾಮಾಂಜನೇಯ ಮಾತನಾಡಿ, ಇಂದು ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಒಳಗಿನ ಜೀವರಾಶಿಗಳು ನಾಶವಾಗಿವೆ. ಇದರಿಂದಾಗಿ ಭೂಕುಸಿತದ ಅವಘಡಗಳು ಸಂಭವಿಸುತ್ತಿವೆ. ಇಂದು ನಾವು ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಆರೋಗ್ಯಯುತ ನೈಸರ್ಗಿಕವಾಗಿ ಕೃಷಿ ಮಾಡಿ ಮಣ್ಣನ್ನು ಸಂರಕ್ಷಣೆ ಮಾಡಬೇಕು ಎಂದರು. ಇಕಾಂ ಸಂಸ್ಥೆ ಸುಸ್ಥಿರ ಕೃಷಿ ವಿಭಾಗದ ಮುಖ್ಯಸ್ಥ ಚೆಂಗಲ್ ರಾಯಪ್ಪ ಮಾತನಾಡಿ, ಕಾಫಿ ತೋಟಗಳಲ್ಲಿ ಮಹಿಳೆಯರು ವ್ಯವಸ್ಥಾಪಕಿ, ಮಾಲಕಿ ಆಗಬೇಕು. ಮಹಿಳಾ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ ವಿವಿಧ ಅಭಿವೃದ್ಧಿಪಡಿಸಿದ ಕಾಫಿ ತಳಿಗಳ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಭೈರವಿ ರವಿ, ಕಾಫಿ ಮಂಡಳಿ ಸದಸ್ಯರಾದ ದಿವಿನ್‌ರಾಜ್, ಭಾಸ್ಕರ್ ವೆನಿಲ್ಲಾ, ಇಕಾಂ ಸಂಸ್ಥೆಯ ಸಿಬ್ಬಂದಿಗಳಾದ ಟಿ.ಎಸ್. ಧರ್ಮೇಶ್, ತಾರಾ, ಬೆಳೆಗಾರರಾದ ಟಿ.ಎಂ. ಉಮೇಶ್, ಎಂ.ಸಿ. ಯೋಗೀಶ್, ಎಂ.ಕೆ. ಸುಂದರೇಶ್, ಎಂ.ಎಸ್. ಜಯಪ್ರಕಾಶ್ ಮತ್ತಿತರರು ಹಾಜರಿದ್ದರು.-----
ಇಂಡಿಯಾ ಆ್ಯಪ್ ಬಿಡುಗಡೆ (ಬಾಕ್ಸ್)ಕಾಫಿ ಬೆಳೆಗಾರರು ಇನ್ನು ಮುಂದೆ ತಮ್ಮ ಕೆಲಸ ಕಾರ್ಯಗಳಿಗಾಗಿ ಕಾಫಿ ಮಂಡಳಿಯ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಇಂಡಿಯಾ ಕಾಫಿ ಎಂಬ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಫಿ ಮಂಡಳಿಗೆ ಸಂಬಂಧಿಸಿದ ಎಲ್ಲಾ ಅರ್ಜಿ ನಮೂನೆಗಳನ್ನು ಈ ಆ್ಯಪ್ ಮೂಲಕ ಸಲ್ಲಿಸಬಹುದು. ಸಬ್ಸಿಡಿಗಳನ್ನು ಸಹ ಈ ಆ್ಯಪ್ ಮೂಲಕವೇ ಸಲ್ಲಿಸಿ ಪಡೆಯಬಹುದು. ಯಾವುದೇ ರೈತರು ತಮ್ಮ ಕಾಫಿ ತೋಟಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡಿದ್ದರೆ ಅದನ್ನು ಸಂಶೋಧನಾ ಸಂಸ್ಥೆಗೆ ತಂದು ಹೆಚ್ಚಿನ ಪ್ರಯೋಗ ಮಾಡಲು ಸಹ ಅವಕಾಶವಿದೆ. ಅವರಿಗೆ ಪ್ರೋತ್ಸಾಹ ನೀಡಿ ಅಗತ್ಯ ಸಹಕಾರ ನೀಡಲಾಗುವುದು. ಈ ವರ್ಷ ಕೇಂದ್ರ ಸರ್ಕಾರ ಕಾಫಿ ಮಂಡಳಿಗೆ ₹307 ಕೋಟಿ ಅನುದಾನವನ್ನು ನೀಡಿದ್ದು, ಇದರಲ್ಲಿ ₹90 ಕೋಟಿ ಹಣವನ್ನು ಸಬ್ಸಿಡಿಗೆ ಮೀಸಲಿರಿಸಲಾಗಿದೆ ಎಂದು ಎಂ.ಜೆ. ದಿನೇಶ್ ದೇವವೃಂದ ತಿಳಿಸಿದರು.