ತಂತ್ರಜ್ಞಾನಕ್ಕೆ ಮಾರು ಹೋಗಿರುವ ಯುವ ಪೀಳಿಗೆಯಲ್ಲಿ ಓದುವ-ಬರೆಯುವ ಹವ್ಯಾಸವೇ ಕಡಿಮೆಯಾಗುತ್ತಿದ್ದು, ಈ ಹವ್ಯಾಸ ಎಂದಿಗೂ ಮಾಸದಿರಲಿ. ಈ ನಿಟ್ಟಿನಲ್ಲಿ ಯುವ ಪೀಳಿಗೆಯಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಆಗಬೇಕು.
ಧಾರವಾಡ:
ಸಿರಿಗನ್ನಡ ಫೌಂಡೇಶನ್ ಕರ್ನಾಟಕ ವತಿಯಿಂದ ಸಾಧಕರ ಸಂಭ್ರಮ ಕಾರ್ಯಕ್ರಮವನ್ನು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾ ಸವದತ್ತಿ ಮಾತನಾಡಿ, ತಂತ್ರಜ್ಞಾನಕ್ಕೆ ಮಾರು ಹೋಗಿರುವ ಯುವ ಪೀಳಿಗೆಯಲ್ಲಿ ಓದುವ-ಬರೆಯುವ ಹವ್ಯಾಸವೇ ಕಡಿಮೆಯಾಗುತ್ತಿದ್ದು, ಈ ಹವ್ಯಾಸ ಎಂದಿಗೂ ಮಾಸದಿರಲಿ. ಈ ನಿಟ್ಟಿನಲ್ಲಿ ಯುವ ಪೀಳಿಗೆಯಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಆಗಬೇಕು. ಆಗ ಮಾತ್ರ ಸಾಹಿತ್ಯ ಕೃಷಿ ಆಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಮೇಯರ್ ಜ್ಯೋತಿ ಪಾಟೀಲ, ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಅಂದಾಗ ಮಾತ್ರವೇ ಕಲೆಯೂ ಉಳಿಸಿ, ಬೆಳೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಲಾವಿದರಿಗೆ ಗೌರವಿಸುವ ಕಾರ್ಯ ಮಾಡಿದಾಗ ಕಲಾವಿದರ ಬದುಕಿಗೂ ಅರ್ಥ ಸಿಗಲಿದೆ. ಇನ್ನು ಎಲ್ಲ ಕ್ಷೇತ್ರದ ಸಾಧಕರಿಗೆ ಒಂದೇ ವೇದಿಕೆಯಲ್ಲಿ ಗೌರವಿಸುವಂತಹ ಕಾರ್ಯ ಮಾಡಿರುವ ಸಿರಿಗನ್ನಡ ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಡಾ. ಬಿ.ಎನ್. ಪಾಟೀಲ ಮಾತನಾಡಿದರು. ಸಾಹಿತಿ ಡಾ. ಈರಣ್ಣ ಇಂಜನಗೇರಿ ವಿಶೇಷ ಉಪನ್ಯಾಸ ನೀಡಿದರು. ಸಿರಿಗನ್ನಡ ಫೌಂಡೇಶನ್ ಅಧ್ಯಕ್ಷ ರಾಜೇಂದ್ರಕುಮಾರ ಮಠ ಪ್ರಾಸ್ತಾವಿಕ ಮಾತನಾಡಿದರು.
ಸಾಧಕರಿಗೆ ಪ್ರಶಸ್ತಿ:ಗಾಯಕಿ ಪೂಜಾ ವಿಭೂತಿಮಠ, ಧಾರವಾಡ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಶಿವಗಂಗವ್ವ ಬುದ್ನಿ, ಧಾರವಾಡ ಶಹರ ಕದಳಿ ವೇದಿಕೆ ಅಧ್ಯಕ್ಷೆ ನೇಹಾ ಬುದ್ನಿ, ನಾಗಮ್ಮ ಕಾಳಿ, ಇಂಗ್ಲೆಡನ ಡಾ. ಪ್ರೇಮಲತಾ ಬಿ. ರಾಜ್ಯಮಟ್ಟದ ಹೆಮ್ಮೆಯ ಕನ್ನಡತಿ ಹಾಗೂ ಶಹನಾಯಿ ವಾದಕ ಶ್ರೀಧರ ಭಜಂತ್ರಿ, ಡಾ. ಉದಯರಾಮಕೃಷ್ಣ ರಘುವೀರಮಠ, ಎಂ. ನಟರಾಜ್ ಕುಂದೂರು, ಸಂತೋಷಗೌಡ ಪಾಟೀಲ, ಡಾ. ವೀರೇಶ ಬಿರಾದಾರ ಸೇರಿದಂತೆ ಸಾಧಕರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಲ್ಲದೇ ಸಾರ್ಥಕ ಸಪ್ತಾಹ ತಂಡ ಸೇರಿ ವಿವಿಧ ಕ್ಷೇತ್ರ ಸಾಧಕರಿಗೆ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ, ಕೌಶಲ್ಯರತ್ನ, ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಚೇತನ ಫೌಂಡೇಶನ್ ಸಂಸ್ಥಾಪಕ ಚಂದ್ರಶೇಖರ ಮಾಡಲಗೇರಿ, ಅನು ಎಂ.ಎಸ್., ಸುವರ್ಣಾ ಲಿಗಾಡೆ ಸೇರಿದಂತೆ ಹಲವರು ಇದ್ದರು. ಜಯಲಕ್ಷ್ಮೀ ಹೊಳೆಆಲೂರ ನಿರೂಪಿಸಿದರು. ಸಂಗಮೇಶ ಅಂಬಿಗೇರ ವಂದಿಸಿದರು. ಗೋವಾದ ಶಹನಾಯಿ ವಾದಕ ಶ್ರೀಧರ ಭಜಂತ್ರಿ ಸಂಗೀತ ಕಾರ್ಯಕ್ರಮ ಜರುಗಿತು. ವಿದ್ವಾನ್ ಸರ್ವೇಶ್ವರ ಮನವಾಚಾರ್ಯ ಅವರ ಶ್ರೀಪದ್ಮ ಭಾಸ್ಕರ ನೃತ್ಯ ಕಲಾಕೇಂದ್ರ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಂಡಿತು.