ಯೂರಿಯೂ ಒಳಗಿಟ್ಟು, ಹೊರಗೆ ನೋಸ್ಟಾಕ್‌ ಬೋರ್ಡ್‌!

| Published : Aug 10 2025, 01:33 AM IST

ಸಾರಾಂಶ

ಕಳೆದ 23 ದಿನಗಳಿಂದ ಉತ್ತಮ ಮಳೆಯಾದ ಕಾರಣ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಅಂಗಡಿಗಳಲ್ಲಿ ಯೂರಿಯಾ ನೋ ಸ್ಟಾಕ್‌ ಬೋರ್ಡ್‌ ಹಾಕಿ, ಗೋದಾಮುಗಳಲ್ಲಿ ಅಕ್ರಮ ದಾಸ್ತಾನು ಮಾಡಿದನ್ನು ರೈತರೇ ಪತ್ತೆ ಮಾಡಿರುವ ಘಟನೆ ಜರುಗಿದೆ.

ಗೋದಾಮುಗಳಲ್ಲಿ ಅಕ್ರಮ ದಾಸ್ತಾನು ಪತ್ತೆ ಹಚ್ಚಿದ ರೈತರುಇನ್ನು ರಹಸ್ಯ ಸ್ಥಳದಲ್ಲಿದೆ ಯೂರಿಯಾ । ಪತ್ತೆ ಮಾಡದ ಅಧಿಕಾರಿಗಳುಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಕಳೆದ 23 ದಿನಗಳಿಂದ ಉತ್ತಮ ಮಳೆಯಾದ ಕಾರಣ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಅಂಗಡಿಗಳಲ್ಲಿ ಯೂರಿಯಾ ನೋ ಸ್ಟಾಕ್‌ ಬೋರ್ಡ್‌ ಹಾಕಿ, ಗೋದಾಮುಗಳಲ್ಲಿ ಅಕ್ರಮ ದಾಸ್ತಾನು ಮಾಡಿದನ್ನು ರೈತರೇ ಪತ್ತೆ ಮಾಡಿರುವ ಘಟನೆ ಜರುಗಿದೆ.

ಹೌದು, ತಾಲೂಕಿನ ಎಲ್ಲ ಆಗ್ರೋ ಕೇಂದ್ರಗಳ ಮಾರಾಟಗಾರರಿಗೆ ಯೂರಿಯಾ ಪೂರೈಕೆಯಾಗಿದೆ. ಆದರೆ ನೆಪಕ್ಕೆ 10-20 ರೈತರಿಗೆ ಯೂರಿಯಾ ಗೊಬ್ಬರ ಮಾರಾಟ ಮಾಡಿ ನೋ ಸ್ಟಾಕ್‌ ಬೋರ್ಡ್‌ ಹಾಕುತ್ತಿದ್ದಾರೆ. ಉಳಿದ ಯೂರಿಯಾ ಗೊಬ್ಬರವನ್ನು ತಮ್ಮ ಜಮೀನುಗಳಲ್ಲಿ ನಿರ್ಮಿಸಿದ, ಗೋದಾಮುಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ. ತಮ್ಮ ಬಳಿ ಬಿತ್ತನೆ ಬೀಜ ಮತ್ತು ರಸ ಗೊಬ್ಬರವನ್ನು ಉದ್ರಿಯಾಗಿ ಖರೀದಿ ಮಾಡುವ ರೈತರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ಇಲ್ಲಿನ ಕರ್ನಾಟಕ ಆಗ್ರೋ ಕೇಂದ್ರಕ್ಕೆ 320 ಚೀಲ ಯಾರಿಯಾ ರಸಗೊಬ್ಬರ ಪೂರೈಕೆಯಾಗಿತ್ತು. ಅಂಗಡಿಯಲ್ಲಿ ಕೇಳಿದರೆ ನಮ್ಮ ಬಳಿ 50 ಚೀಲ ಮಾತ್ರ ಇದೆ. ಅದನ್ನು ರೈತರಿಗೆ ಮಾರಾಟ ಮಾಡುತ್ತೇನೆಂದು ಮಾಲಿಕ ಹೇಳಿದ್ದಾನೆ. ಅಂಗಡಿ ಮತ್ತು ಗೋದಾಮಿಗೆ ನೂರಾರು ರೈತರು ಮುತ್ತಿಗೆ ಹಾಕಿದ್ದರು. ಒಂದು ಗೋದಾಮು ತೆರೆದಾಗ 50 ಚೀಲದ ಬದಲಿಗೆ 100 ಚೀಲ ಯೂರಿಯಾ ಇತ್ತು. ಅದನ್ನು ಸರದಿ ಸಾಲಿನಲ್ಲಿ ನಿಂತಿದ್ದ ರೈತರಿಗೆ ವಿತರಿಸಿದ ಬಳಿಕ, ಯೂರಿಯಾ ಖಾಲಿಯಾಗಿದೆ ಎಂದು ಹೇಳಿದರು. ಕೂಡಲೇ ಸ್ಥಳದಲ್ಲೇ ಇದ್ದ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ ಮತ್ತು ಕಲಿಕೇರಿ ಬಸವರಾಜ ಸೇರಿದಂತೆ ರೈತರ ಜತೆಗೂಡಿ ಪಕ್ಕದಲ್ಲೇ ಇದ್ದ ಗೋದಾಮು ತೆಗೆಯಬೇಕೆಂದು ಪಟ್ಟು ಹಿಡಿದರು. ಅದರಲ್ಲಿ ಯೂರಿಯಾ ಇಲ್ಲ ಎಂದು ಮಾಲೀಕ ವಾದ ಮಾಡುತ್ತಿದ್ದರೂ, ಪಟ್ಟು ಬಿಡದ ರೈತರು ಗೋದಾಮು ತೆರೆದಾಗ 220 ಚೀಲ ಯೂರಿಯಾ ಅಕ್ರಮವಾಗಿ ದಾಸ್ತಾನು ಆಗಿತ್ತು. ರೈತರು ಸರದಿ ಸಾಲಿನಲ್ಲಿ ನಿಂತು 300 ರು.ಗಳಿಗೆ ಒಂದು ಚೀಲದಂತೆ ಖರೀದಿ ಮಾಡಿದರು. ಸರದಿಯಲ್ಲಿ ನಿಂತಿದ್ದ 50ಕ್ಕೂ ಹೆಚ್ಚು ರೈತರಿಗೆ ಯೂರಿಯಾ ಸಿಗದ ಕಾರಣ ಮನೆ ಕಡೆಗೆ ಹೆಜ್ಜೆ ಹಾಕಿದರು.

ಮುಂಗಾರಿನ ಬೆಳೆಗಳಿಗೆ ಬೇಡಿಕೆಗೆ ತಕ್ಕಷ್ಟು ಯೂರಿಯಾ ಪೂರೈಕೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಹೇಳುತ್ತಾರೆ, ಆದರೆ ರೈತರಿಗೆ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ, ಹಾಗಾದರೆ ರಸಗೊಬ್ಬರ ಮಾರಾಟಗಾರರು ಇನ್ನು ರಹಸ್ಯ ಜಾಗಗಳಲ್ಲಿ ಯೂರಿಯಾ ಅಕ್ರಮ ದಾಸ್ತಾನು ಮಾಡಿದ್ದಾರೆ. ಇದನ್ನು ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಮಾಡಲು ಹಿಂದೇಟು ಹಾಕುತ್ತಿರುವ, ಹಿಂದಿನ ರಹಸ್ಯವೇನು ಎಂಬ ಅನುಮಾನ ರೈತರಲ್ಲಿ ಮೂಡುತ್ತಿದೆ.

ಯೂರಿಯಾಕ್ಕಾಗಿ ರೈತರು, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತಿದ್ದರು. ಒಬ್ಬರಿಗೆ 1 ಚೀಲ ಮಾತ್ರ ಯೂರಿಯಾ ಸಿಕ್ಕಿದೆ. ಅಂಗಡಿಯ ರಸೀದಿ, ಬಿಲ್‌ ಇಲ್ಲದೇ 300 ರು.ಗಳಿಗೆ ಚೀಲದಂತೆ ಮಾರಾಟ ಮಾಡಿದ್ದಾರೆ. ಆದರೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೂ ಅಧಿಕಾರಿಗಳು ಮಾತ್ರ ಯಾವ ಕ್ರಮ ಕೈಗೊಂಡಿಲ್ಲ. ಕೆಲವೊಬ್ಬ ಡೀಲರ್ಸ್‌ 600 ರು.ಗಳಿಗೆ ಚೀಲ ಯೂರಿಯಾ ಮಾರಾಟ ಮಾಡಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ. ಹಳ್ಳಿಗಳಲ್ಲಂತೂ ರೈತರು ಯೂರಿಯಾ ಕೇಳಿದರೇ ನಮ್ಮಲ್ಲಿ ಖಾಲಿಯಾಗಿದೆ. ಬೇರೆ ಕಡೆಗೆ ಇದೆ, ಬೇಕಾದರೇ ಬೆಲೆ ಹೆಚ್ಚಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೂ ರೈತರು ವಿಧಿ ಇಲ್ಲದೇ 500 ರು.ಗಳಿಗೂ ಖರೀದಿ ಮಾಡಿದ್ದಾರೆ. ತಮ್ಮ ಗೋದಾಮುಗಳನ್ನು ಬಿಟ್ಟು ದೊಡ್ಡ ರೈತರಿಗೆ ಸೇರಿದ ಗೋದಾಮುಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ, ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ರೈತರದ್ದು.ಕೃಷಿ ಅಧಿಕಾರಿಗಳು ದಾಳಿ ಮಾಡಲಿ

ಅಂಗಡಿಯಲ್ಲಿ ಯೂರಿಯಾ ನೋ ಸ್ಟಾಕ್‌ ಬೋರ್ಡ್‌ ಹಾಕಿ ಗೋದಾಮುಗಳಲ್ಲಿ ಅಕ್ರಮ ದಾಸ್ತಾನು ಮಾಡಿದ್ದಾರೆ. ಅಂಗಡಿಗೆ ನುಗ್ಗಿ ರೈತರನ್ನು ಸಮಾಧಾನ ಪಡಿಸಿದ ಗೋದಾಮಿನಲ್ಲಿದ್ದ ಯೂರಿಯಾವನ್ನು ರೈತರಿಗೆ ವಿತರಿಸುವ ಕೆಲಸ ಮಾಡಿದ್ದೇವೆ. ಇನ್ನು ರಹಸ್ಯ ಜಾಗದಲ್ಲಿರುವ ಗೋದಾಮಿನ ಮೇಲೆ ಕೃಷಿ ಅಧಿಕಾರಿಗಳು ದಾಳಿ ರೈತರಿಗೆ ಯೂರಿಯಾ ಪೂರೈಕೆ ಮಾಡಬೇಕೆಂದು ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಕಲಿಕೇರಿ ಬಸವರಾಜ ಒತ್ತಾಯಿಸಿದ್ದಾರೆ.