ಸಾರಾಂಶ
ಮಂಗಳೂರು ಜೈಲಿನೊಳಗೆ ಪೊಟ್ಟಣ ಎಸೆದ ಪ್ರಕರಣದ ಸಮಗ್ರ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಜೈಲಿನೊಳಗೆ ಪೊಟ್ಟಣ ಎಸೆದ ಪ್ರಕರಣದ ಸಮಗ್ರ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನೊಳಗೆ ಅಪರಿಚಿತರಿಬ್ಬರು ಹೊರಗಿನಿಂದ ಪೊಟ್ಟಣ ಬಿಸಾಡಿದ್ದನ್ನು ಮಾಜಿ ಮೇಯರ್ ಕವಿತಾ ಸನಿಲ್ ದಾಖಲೆ ಸಮೇತ ಪತ್ತೆ ಹಚ್ಚಿದ್ದಾರೆ. ಆದರೆ ಜೈಲಿನೊಳಗೆ ಎಸೆದ ಪೊಟ್ಟಣದಲ್ಲಿ ಚಾಹುಡಿ ಇತ್ತು ಎಂದು ಜೈಲಧಿಕಾರಿಗಳು ಹೇಳುತ್ತಾರೆ. ಜೈಲಿನ ಕೈದಿಗಳಿಗೆ ಚಾಹುಡಿ ನೀಡುವಷ್ಟು ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲವೇ ಎಂದು ಪ್ರಶ್ನಿಸಿದರು.ಜೈಲಿನೊಳಗೆ ಮಾದಕ ವಸ್ತುಗಳ ಪೂರೈಕೆ ಆಗಾಗ ಬೆಳಕಿಗೆ ಬರುತ್ತಲೇ ಇದೆ. ಮಾದಕ ವಸ್ತುಗಳು ಎಲ್ಲಿಂದ, ಹೇಗೆ ಪೂರೈಕೆ ಆಗುತ್ತಿವೆ ಎಂಬುದನ್ನು ಪತ್ತೆ ಮಾಡಬೇಕು ಎಂದು ನಂದನ್ ಮಲ್ಯ ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಇಲಾಖೆಗೆ ಮುಕ್ತವಾಗಿ ಕೆಲಸ ಮಾಡಲು ರಾಜ್ಯ ಸರ್ಕಾರ ಸ್ವಾತಂತ್ರ್ಯ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಕರ್ನಾಟಕ ಈಗ ಹಿಂದಿನ ಬಿಹಾರ ಆಗುತ್ತಿದೆ ಎಂದು ಟೀಕಿಸಿದರು.ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, ಪೊಟ್ಟಣವನ್ನು ಜೈಲಿನೊಳಗೆ ಯಾರು ಹೆಕ್ಕಿದ್ದಾರೆ ಎಂಬುದನ್ನು ಜೈಲಧಿಕಾರಿಗಳು ತಿಳಿಸಿದ್ದಾರೆ. ಆತನನ್ನು ವಿಚಾರಣೆ ಮಾಡಿದರೆ ಎಸೆದದ್ದು ಯಾರು ಎಂಬುದು ತಿಳಿಯಲಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್‌ರಾಜ್ ಕೃಷ್ಣಾಪುರ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಗರೋಡಿ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಉತ್ತರ ಮಂಡಲ ಅಧ್ಯಕ್ಷ ರಕ್ಷಿತ್ ಪೂಜಾರಿ ಇದ್ದರು.