ಸಾರಾಂಶ
ಯುವಕರು ಅಧ್ಯಯನಶೀಲರಾಗಬೇಕು ಹೋರಾಟದ ಮನೋಭಾವ ಇರಬೇಕು ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಿಳಿಸಬೇಕು ಮತ್ತು ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡಬೇಕು
ಕನ್ನಡಪ್ರಭ ವಾರ್ತೆ ಬೀದರ್
ಭಾರತೀಯ ಜನತಾ ಪಕ್ಷವು ರಾಷ್ಟ್ರ ನಿರ್ಮಾಣದ ಹಿತಕ್ಕಾಗಿ ದೇಶ ಮೊದಲು ಎಂಬ ಧ್ಯೇಯವನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕವು ಯುವಕರಿಗೆ ಸದ್ವಿಚಾರಗಳನ್ನು ತಿಳಿಸುತ್ತಾ ಸಂಘಟಿಸಬೇಕಿದೆ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಹಾಗೂ ಯುವಮೋರ್ಚಾ ಜಿಲ್ಲಾ ಪ್ರಭಾರಿ ಗುರುನಾಥ ರಾಜಗೀರಾ ಹೇಳಿದರು.ಅವರು ನಗರದ ನೌಬಾದಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವಿಶೇಷ ಸಭೆಯಲ್ಲಿ ಮಾತನಾಡಿ, ಯುವಕರು ಅಧ್ಯಯನಶೀಲರಾಗಬೇಕು ಹೋರಾಟದ ಮನೋಭಾವ ಇರಬೇಕು ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಿಳಿಸಬೇಕು ಮತ್ತು ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪಾ ಔರಾದೆ ಮಾತನಾಡಿ, ಯುವಮೋರ್ಚಾ ಎಂದರೆ ಪಕ್ಷದ ಬೆನ್ನೆಲುಬು ಇದ್ದಂತೆ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಶ್ರಮಿಸಬೇಕು ಎಂದರು. ಈಗ ಎಲ್ಲಾ ಕಡೆ ಪಕ್ಷದಿಂದ ಸದಸ್ಯತಾ ಅಭಿಯಾನ ನಡೆಯುತಿದ್ದು ಜಿಲ್ಲೆಯಲ್ಲಿ ಯುವ ಮೋರ್ಚಾದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸದಸ್ಯರನ್ನಾಗಿ ಮಾಡಬೇಕೆಂದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷವು ಸೂಚಿಸಿದ ಎಲ್ಲಾ ಕಾರಯಕ್ರಮಗಳನ್ನು ಮಾಡುವುದರ ಜೊತೆಗೆ ಸದಸ್ಯತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸೋಣ ಎಂದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿರೇಶ ಸ್ವಾಮಿ, ರಮೇಶ ಕಲ್ಲೂರ ಸೇರಿದಂತೆ ಯುವ ಮೋರ್ಚಾದ ಜಿಲ್ಲೆಯ ಪದಾಧಿಕಾರಿಗಳಿದ್ದರು.